Monday, May 6, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಪಕ್ಷ ಸೋಲಿಸಲು ಕೆಲವರಿಂದ ಕುತಂತ್ರ ರಾಜಕಾರಣ : ಹೆಚ್.ಡಿ.ಕೆ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ರವೀಂದ್ರ ಶ್ರೀಕಂಠಯ್ಯ ಅವರನ್ನು ಸೋಲಿಸಲೇ ಬೇಕೆಂದು ಕೆಲವರು ಕುತಂತ್ರದಿಂದ ನಮ್ಮ ಹಳೆಯ ಸ್ನೇಹಿತ ತಗ್ಗಹಳ್ಳಿ ವೆಂಕಟೇಶ್ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮಂಡ್ಯ ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಗ್ಗಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೊತ್ತತ್ತಿ 2 ನೇ ವೃತ್ತ ಭಾಗದ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.

ನಾನು ತಗ್ಗಹಳ್ಳಿ ವೆಂಕಟೇಶ್ ಸೇರಿದಂತೆ ಯಾರ ಬಗ್ಗೆಯೂ ಮಾತನಾಡುವುದಿಲ್ಲ.ನಮ್ಮ ಪಕ್ಷ ಅವರಿಗೆ ಪ್ರೀತಿ ಕೊಟ್ಟಿದೆ‌. ಜಿಲ್ಲೆಯಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಜಿಲ್ಲೆಯ ಜನರು ಪ್ರೀತಿ, ವಿಶ್ವಾಸ ತೋರುವವರನ್ನು ಹೆಗಲ ಮೇಲೆತ್ತುಕೊಂಡು ಮೆರೆಸುತ್ತಾರೆ. ಒಂದು ವೇಳೆ ಪ್ರೀತಿಗೆ ಚ್ಯುತಿ ಬಂದರೆ ನೆಲಕ್ಕೆ ಹಾಕಿ ತುಳಿಯುತ್ತಾರೆ .ಜಿಲ್ಲೆಯ ಜನರು ಅಧಿಕಾರ, ಹಣಕ್ಕೆ ಎಂದೂ ಪ್ರಾಶಸ್ತ್ಯ ನೀಡಿದವರಲ್ಲ. ನನಗೆ ಎರಡು ಬಾರಿ ಹೃದಯದ ಶಸ್ತ್ರ ಚಿಕಿತ್ಸೆ ಆಗಿದೆ.ನಾನು ಮೂರನೇ ಬಾರಿ ಮುಖ್ಯಮಂತ್ರಿ ಆಗುವುದಕ್ಕಾಗಿ ಅಧಿಕಾರ ಕೊಡಿ ಎನ್ನುತ್ತಿಲ್ಲ.ಹಣ ಮಾಡುವ ಹಂಬಲವೂ ಇಲ್ಲ.ಕನ್ನಡಿಗರು ಹಾಗೂ ರೈತರಿಗಾಗಿ ನನ್ನ ಆರೋಗ್ಯವನ್ನು ಲೆಕ್ಕಿಸದೇ ಕಳೆದ ನಾಲ್ಕೂವರೆ ತಿಂಗಳಿಂದ ಪಂಚರತ್ನ ಯಾತ್ರೆ ಹೆಸರಿನಲ್ಲಿ ರಾಜ್ಯದಲ್ಲಿ ಹಗಲಿರುಳು ಪ್ರವಾಸ ಮಾಡಿ ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ ಎಂದರು.

ಸತ್ವ ಪರೀಕ್ಷೆ
ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಜೆಡಿಎಸ್ ಪಕ್ಷಕ್ಕೆ ಸತ್ವ ಪರೀಕ್ಷೆಯಾಗಿದೆ. ರೈತರ ಹಾಗೂ ಬಡವರ ಪಕ್ಷವಾಗಿರುವ ಜಾ.ದಳವನ್ನು ಅಧಿಕಾರಕ್ಕೆ ತಂದು ಅವರ ಕಣ್ಣೀರು ಒರೆಸಲು ಬಹುಮತ ನೀಡಿ ಎಂದು ರಾಜ್ಯದ ಜನರಲ್ಲಿ ಕೇಳುತ್ತಿದ್ದೇನೆ.ಅದೇ ರೀತಿ ಜಿಲ್ಲೆಯ ಜನರು ನನ್ನ ಕಷ್ಟ ಮತ್ತು ಪರಿಶ್ರಮಕ್ಕೆ ಬೆಲೆ ನೀಡಿ.ಎಂದಿಗೂ ಕೈ ಬಿಡಬೇಡಿ. ಕಳೆದ ಬಾರಿಯಂತೆ ಏಳು ಕ್ಷೇತ್ರಗಳಲ್ಲೂ ಜಾ.ದಳ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಪ್ರಾದೇಶಿಕ ಪಕ್ಷವಾಗಿರುವ ಜಾ.ದಳವನ್ನು ಅಧಿಕಾರಕ್ಕೆ ತರಲು ಒಂಟಿಯಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇನೆ. ಜಾ.ದಳವನ್ನು ಮುಗಿಸಲು ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಭಾರೀ ಕುತಂತ್ರ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ,ಗೃಹ ಮಂತ್ರಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಸೇರಿದಂತೆ ಘಟಾನುಘಟಿ ನಾಯಕರು ರಾಜ್ಯಕ್ಕೆ ದಾಂಗುಡಿ ಇಟ್ಟಿದ್ದಾರೆ.ಯಾರೇ ಬಂದರೂ ಜೆಡಿಎಸ್ ಪಕ್ಷ ಮುಗಿಸಲು ಸಾಧ್ಯವಿಲ್ಲ. ಏಕೆಂದರೆ ಇದು ರಾಜ್ಯದ ರೈತರ,ಜನಸಾಮಾನ್ಯರ ಪಕ್ಷ. ನಾನು ಒಬ್ಬಂಟಿಯಾಗಿ ಹೋರಾಟ ಮಾಡುತ್ತಿರುವುದನ್ನು ಕಂಡು ಹಾಸಿಗೆಯಲ್ಲಿ ಮಲಗಿದ್ದ ಎಚ್.ಡಿ.ದೇವೇಗೌಡರು ಮೇಲೆದ್ದು, ಪಕ್ಷ ಮತ್ತು ರೈತರನ್ನು ಉಳಿಸಲು ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರತಿದಿನ ನಾಲ್ಕು ಸಭೆಗಳನ್ನು ನಡೆಸುತ್ತಿದ್ದಾರೆ. ಅವರ ಮಾತು ಕೇಳಿದರೆ ನನಗೇ ಆಶ್ಚರ್ಯ ಮತ್ತು ಆತಂಕವಾಗುತ್ತದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಜನ ಎಚ್.ಡಿ. ದೇವೇಗೌಡ ಅವರ 6೦ ವರ್ಷದ ರಾಜಕೀಯ ಜೀವನ, ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಶಕ್ತಿ ತುಂಬಿದ್ದೀರಿ. ಜಿಲ್ಲೆಯ ಜನ ಎತ್ತಿದರೆ ಮೇಲೆತ್ತುತ್ತೀರಿ, ಇಲ್ಲವಾದಲ್ಲಿ ಒಂದೇಸಲ ಕೆಳಕ್ಕೆ ಕುಕ್ಕುತ್ತೀರಿ. ರಾಜ್ಯದ ರಾಜಕಾರಣವೇ ಬೇರೆಯಾದರೆ, ಮಂಡ್ಯ ರಾಜಕಾರಣವೇ ಬೇರೆ ಎಂದರು.

ಹೃದಯವಂತ-ಕೆಲಸಗಾರ
ರವೀಂದ್ರ ಶ್ರೀಕಂಠಯ್ಯ ಹೃದಯವಂತ, ಕೆಲಸಗಾರ.ಅವರದ್ದು ನೇರ ನಡೆ-ನುಡಿಯ ವ್ಯಕ್ತಿತ್ವ. ಆದರೆ ಮನಸ್ಸಿನಲ್ಲಿ ಕಲ್ಮಶವಿಲ್ಲ. ತಾಯಿ ಹೃದಯದ ರವೀಂದ್ರ ಹಿಂದೆಂದೂ ಆಗದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ಈ ಬಾರಿಯೂ ಗೆಲ್ಲಿಸಿ ನನ್ನ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಜಾ.ದಳ ರಾಜ್ಯ ಉಪಾಧ್ಯಕ್ಷರಾಗಿ ಆದರ್ಶ ಹೊನ್ನಪ್ಪ ಅವರನ್ನು ನೇಮಕ ಮಾಡಿ ಆದೇಶ ಪ್ರತಿಯನ್ನು ಎಚ್.ಡಿ. ಕುಮಾರಸ್ವಾಮಿ ನೀಡಿದರು. ವೇದಿಕೆಯಲ್ಲಿ ಮಂಡ್ಯ ಕ್ಷೇತ್ರದ ಜಾ.ದಳ ಅಭ್ಯರ್ಥಿ ಬಿ.ಆರ್.ರಾಮಚಂದ್ರು, ರಾಜ್ಯ ಜಾ.ದಳ ಉಪಾಧ್ಯಕ್ಷ ಎಂ.ಸಂತೋಷ್, ತಾಲೂಕು ಅಧ್ಯಕ್ಷ ಪೈ.ಮುಕುಂದ, ವಕೀಲ ಕೆ.ಎಂ. ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!