Monday, May 20, 2024

ಪ್ರಾಯೋಗಿಕ ಆವೃತ್ತಿ

ಕೆ.ಎಸ್. ಪುಟ್ಟಣ್ಣಯ್ಯನವರು ಬದುಕಿದ್ದರೆ ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತಿರಲಿಲ್ಲ

ಪಾಂಡವಪುರ ಮಂಜುನಾಥ್

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಜೊತೆಗೂಡಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಎಚ್.ಡಿ. ಕುಮಾರಸ್ವಾಮಿ, ‘ತಮ್ಮ ಇಡೀ ಜೀವಿತವನ್ನು ಅನ್ನದಾತರ ಒಳಿತಿಗಾಗಿಯೇ ಮೀಸಲಿಟ್ಟು ಹೋರಾಟ ನಡೆಸಿದ ಆ ಚೇತನ (ಪುಟ್ಟಣ್ಣಯ್ಯ)ಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದೆ ಎಂದಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಅನ್ನದಾತರ ಒಳಿತಿಗಾಗಿ ಜೀವನ ಮುಡಿಪಾಗಿಟ್ಟ ಚೇತನ ಕೆ.ಎಸ್.ಪುಟ್ಟಣ್ಣಯ್ಯ ಎಂದು ಹೇಳಿರುವುದು ಸರಿಯಾಗಿದೆ.ಆದರೆ ಪುಟ್ಟಣ್ಣಯ್ಯ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೊದಲು,ಪುಟ್ಟಣ್ಣಯ್ಯ ಅವರ ಜನಪರ,ರೈತಪರ ಕಾಳಜಿ,
ಪ್ರಗತಿಪರತೆ,ಜಾತ್ಯಾತೀತ ವಿಚಾರಗಳಿಗೆ ಬದ್ಧವಾಗಿದ್ದ,ಕೋಮುವಾದದ ವಿರುದ್ಧವಿದ್ದ ಅವರ ಆದರ್ಶಗಳನ್ನು ಸ್ವಲ್ಪವಾದರೂ ಕೂಡ ಕುಮಾರಸ್ವಾಮಿ ಅರಿಯಬೇಕಿತ್ತಲ್ಲವೇ?

ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕುಮಾರಸ್ವಾಮಿಯಷ್ಟು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ,ಸಂಘ ಪರಿವಾರ, ಕೋಮುವಾದಿಗಳ ವಿರುದ್ಧ ಉಗ್ರವಾಗಿ ಖಂಡಿಸಿದ ವ್ಯಕ್ತಿ ರಾಜ್ಯದಲ್ಲಿ ಮತ್ತೊಬ್ಬರು ಕಾಣಿಸುವುದಿಲ್ಲ.ಅಂದು ಕೋಮುವಾದಿಗಳ ವಿರುದ್ಧ ಕೆರಳಿ ಕೆಂಡವಾಗುತ್ತಿದ್ದ ಕುಮಾರಸ್ವಾಮಿ ಅವರ ನಿಲುವು ಆರು ತಿಂಗಳಿಗೆ ಬದಲಾವಣೆಗೊಂಡು ಇಂದು ಕೋಮುವಾದಿಗಳ ಜೊತೆ ಕೈ ಜೋಡಿಸುವಂತಾಗಲು ಕುಮಾರಸ್ವಾಮಿಯವರಿಗೆ ಇರುವ ಕಾರಣವಾದರೂ ಏನಿತ್ತು ಎಂಬುದು ತಿಳಿಯುತ್ತಿಲ್ಲ.

ರೈತ ನಾಯಕ ಪುಟ್ಟಣ್ಣಯ್ಯನವರು ಇಂದು ಬದುಕಿದ್ದರೆ ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಅವರನ್ನು ಬೆಂಬಲಿಸದೆ, ಅವರನ್ನು ಸೋಲಿಸಲು ಖಂಡಿತವಾಗಿಯೂ ಶ್ರಮಿಸುತ್ತಿದ್ದರು. ಆ ಮೂಲಕ ಮಂಡ್ಯ ಜಿಲ್ಲೆಯನ್ನು ಕೋಮುವಾದೀಕರಣ ಮಾಡುವ ಹುನ್ನಾರವನ್ನು ತಡೆದು ಉಜ್ವಲವಾದ ರೈತ ಪರಂಪರೆಯನ್ನು‌ ಕಾಪಾಡುತ್ತಿದ್ದರು.ಕೆರಗೋಡು ಹನುಮ ಧ್ವಜ ವಿವಾದವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೇಸರೀಕರಣ ಮಾಡಲು ಬಂದಿದ್ದ ಕುಮಾರಸ್ವಾಮಿ ಅವರ ವಿರುದ್ಧ ನಿಂತು ಪ್ರತಿಭಟನೆ ನಡೆಸುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ.

ಕುಮಾರಸ್ವಾಮಿ ಅವರು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ,ಹಣ,ಅಧಿಕಾರಕ್ಕಾಗಿ ಇದುವರೆಗೂ ಉಗ್ರವಾಗಿ ಖಂಡಿಸುತ್ತಿದ್ದ ಕೋಮುವಾದಿ ಪಕ್ಷವನ್ನು ಅಪ್ಪಿಕೊಂಡು,ತಮ್ಮ ಬದುಕಿನುದ್ದಕ್ಕೂ ಕೋಮುವಾದಿಗಳ ವಿರುದ್ಧವಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿರುವುದೂ ಕೂಡ ಸ್ವಾರ್ಥ ರಾಜಕಾರಣದ ತಂತ್ರವಾಗಿಯೇ ಭಾಸವಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!