Wednesday, May 8, 2024

ಪ್ರಾಯೋಗಿಕ ಆವೃತ್ತಿ

ಜನರ ಸಮಸ್ಯೆ ಪರಿಹರಿಸಿ; ತಿಹಾರ್ ಜೈಲಿನಿಂದಲೇ ಶಾಸಕರಿಗೆ ನಿರ್ದೇಶನ ನೀಡಿದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದಲೇ ಶಾಸಕರಿಗೆ ನಿರ್ದೇಶನ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಸಂದೇಶವನ್ನು ಕಳುಹಿಸಿರುವುದಾಗಿ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.

“ಎಲ್ಲಾ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು” ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿರುವುದಾಗಿ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.

“ನಿಮ್ಮ ಕೇಜ್ರಿವಾಲ್ ಅವರು ಜೈಲಿನಿಂದ ಎಲ್ಲಾ ಶಾಸಕರಿಗೆ ಸಂದೇಶ ಕಳುಹಿಸಿದ್ದಾರೆ” ಎಂದು ಹೇಳಿರುವ ಸುನೀತಾ ಕೇಜ್ರಿವಾಲ್ ಅವರು “ನಾನು ಜೈಲಿನಲ್ಲಿದ್ದೇನೆ. ಈ ಕಾರಣದಿಂದಾಗಿ ದೆಹಲಿಯ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಎಲ್ಲ ಶಾಸಕರು ತಮ್ಮ ಕ್ಷೇತ್ರಕ್ಕೆ ಪ್ರತಿದಿನ ಭೇಟಿ ನೀಡಬೇಕು. ಜನರಿಗೆ ಯಾವುದಾದರೂ ಸಮಸ್ಯೆ ಇದೆಯೇ ಎಂದು ಕೇಳಿ. ಯಾರಿಗಾದರೂ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿ” ಎಂದು ಕೇಜ್ರಿವಾಲ್ ತಿಳಿಸಿದ್ದಾರೆ ಎಂದರು.

“ಸರ್ಕಾರದ ಕೆಲಸ ಮಾತ್ರವಲ್ಲದೆ ಜನರ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡಬೇಕು. ದೆಹಲಿಯ ಎರಡು ಕೋಟಿ ಜನರು ನನ್ನ ಪರಿವಾರ. ನನ್ನ ಪರಿವಾರದಲ್ಲಿ ಯಾರೂ ಕೂಡಾ ಯಾವುದೇ ಕಾರಣಕ್ಕೂ ದುಃಖಿತರಾಗಬಾರದು. ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ” ಎಂದು ಅರವಿಂದ್ ಕೇಜ್ರಿವಾಲ್  ತಿಳಿಸಿರುವುವಾಗಿ ಹೇಳಿದರು.

ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಮಾರ್ಚ್ 21 ರಂದು ಸಿಎಂ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು, ಪ್ರಸ್ತುತ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಿಹಾರ್ ಜೈಲಿನಲ್ಲಿರುವ ಕೇಜ್ರಿವಾಲ್ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಎಎಪಿ ಆರೋಪಿಸಿದೆ.

ಇನ್ನು ದೆಹಲಿ ಹೈಕೋರ್ಟ್ ಗುರುವಾರ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಲು ನಿರಾಕರಿಸಿದೆ. ಈ ಹಿಂದೆ ಮಾರ್ಚ್ 28ರಂದು ಹೈಕೋರ್ಟ್ ಇದೇ ವಿಚಾರವಾಗಿ ಸುರ್ಜಿತ್ ಸಿಂಗ್ ಯಾದವ್ ಎಂಬವರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!