Sunday, May 19, 2024

ಪ್ರಾಯೋಗಿಕ ಆವೃತ್ತಿ

ಹೈಕೋರ್ಟ್ ಉಸ್ತುವಾರಿಯಲ್ಲಿ ಲೈಂಗಿಕ ಹಗರಣ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಬಹುದೊಡ್ಡ ಲೈಂಗಿಕ ಹಗರಣ ಕುರಿತು ಹೈಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸೋಮವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.

ಮಂಡ್ಯನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರ ಮತ್ತು ಹಣ ಬಲ ದುರ್ಬಳಕೆ ಮಾಡಿಕೊಂಡು ನೊಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದು, ಕಿಡಿಗೇಡಿಗಳು ಪೆನ್ ಡ್ರೈವ್ ಬಿಡುಗಡೆ ಮಾಡುವ ಮೂಲಕ ಮಹಿಳೆಯರ ಖಾಸಗಿ ಜೀವನ ಪ್ರದರ್ಶಿಸಿ ಮಾನಹಾನಿ ಮಾಡುತ್ತಿದ್ದಾರೆ, ಬಹುದೊಡ್ಡ ಲೈಂಗಿಕ ಹಗರಣ ಪತ್ತೆ ಹೆಚ್ಚುವಲ್ಲಿ ಪೊಲೀಸ್ ಇಲಾಖೆಯ ಗುಪ್ತಚರ ವ್ಯವಸ್ಥೆ ವಿಫಲವಾಗಿದ್ದು, ಜೊತೆಗೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ರಾಜಕೀಯ ತೇಜೋವಧೆ ಮಾಡಲಾಗುತ್ತಿದೆಯೇ ವಿನಹ ಸಂತ್ರಸ್ತ ಮಹಿಳೆಯರ ಮಾನ ಉಳಿಸುವ ಮತ್ತು ನ್ಯಾಯ ದೊರಕಿಸಿ ಕೊಡುವ ಕೆಲಸ ನಡೆಯುತ್ತಿಲ್ಲ, ಇದುವರೆಗೆ ನಡೆದಿರುವ ಲೈಂಗಿಕ ಹಗರಣದಲ್ಲಿ ಯಾವುದೇ ಒಬ್ಬ ಜನಪ್ರತಿನಿಧಿಗೆ ಶಿಕ್ಷೆಯಾದ ನಿದರ್ಶನವಿಲ್ಲ, ಬದಲಾಗಿ ಕಾನೂನು ವ್ಯವಸ್ಥೆ ಜನಸಾಮಾನ್ಯರನ್ನು ಮಾತ್ರ ಶಿಕ್ಷಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್ ಡಿ ರೇವಣ್ಣ, ಪೆನ್ ಡ್ರೈವ್ ಬಿಡುಗಡೆ ಮಾಡಿರುವ ಎಲ್ಲರನ್ನು ಬಂಧಿಸಬೇಕು, ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಲು ನಿರ್ದೇಶಸಬೇಕು, ಸಂತ್ರಸ್ತ ಮಹಿಳೆಯರ ಖಾಸಗಿ ಜೀವನದ ಗೌಪ್ಯತೆ ಕಾಪಾಡಲು ತನಿಖಾ ತಂಡಕ್ಕೆ ಸೂಚಿಸಬೇಕು, ಹಗರಣದ ಎಲ್ಲಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಅನಿಲ್ ಕುಮಾರ್ ಕೆರಗೋಡು, ಕೆ.ಎಂ ಶ್ರೀನಿವಾಸ್, ಮರಂಕಯ್ಯ, ಎಸ್.ಕುಮಾರ್, ಭಾಗ್ಯಮ್ಮ, ಗೀತಾ ಮೇಲುಲಕೋಟೆ, ಸುಕನ್ಯಾ ದುದ್ದ, ಸೋಮಶೇಖರ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!