Sunday, May 5, 2024

ಪ್ರಾಯೋಗಿಕ ಆವೃತ್ತಿ

ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆಯೊಂದಿಗೆ ತಮಿಳುನಾಡು ರೈತರ ಪ್ರತಿಭಟನೆ !

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200 ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ.

ಕೃಷಿಯಲ್ಲಿ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ ಬೆಳೆಗಳ ಬೆಲೆ ಏರಿಕೆ ಮಾಡಿಲ್ಲ, ನದಿಗಳ ಜೋಡಣೆ ವಿಚಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ನ್ಯಾಷನಲ್ ಸೌತ್ ಇಂಡಿಯಾ ರಿವರ್ ಇಂಟರ್‌ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಅಯ್ಯಕಣ್ಣು ಈ ಕುರಿತು ಮಾತನಾಡಿದ್ದು, 2019ರ ಚುನಾವಣೆಯ ಸಮಯದಲ್ಲಿ, ಪ್ರಧಾನಿ ಬೆಳೆಗಳ ಲಾಭವನ್ನು ದ್ವಿಗುಣಗೊಳಿಸುವುದಾಗಿ ಮತ್ತು ನದಿಗಳನ್ನು ಪರಸ್ಪರ ಜೋಡಿಸುವುದಾಗಿ ಘೋಷಿಸಿದ್ದರು, ಆದರೆ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಸರ್ಕಾರ ತಮ್ಮ ಬೇಡಿಕೆಗೆ ಕಿವಿಗೊಡದಿದ್ದರೆ ವಾರಣಾಸಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.

ಸರ್ಕಾರ ನಮ್ಮ ಮಾತು ಕೇಳದಿದ್ದರೆ ವಾರಣಾಸಿಗೆ ತೆರಳಿ ಪ್ರಧಾನಿ ಮೋದಿ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತೇವೆ  ಎಂದು ರೈತರು ಹೇಳಿದ್ದಾರೆ. ನಾವು ಬೇಡಿಕೆಗಳ ಈಡೇರಿಕೆಗೆ ಈ ಹಿಂದೆ ಪ್ರತಿಭಟನೆ ನಡೆಸಿದ್ದೇವೆ. ನಾವು ಪ್ರಧಾನಿ ವಿರುದ್ಧವಾಗಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ, ನಮಗೆ ಅವರ ಸಹಾಯ ಮಾತ್ರ ಬೇಕು ಎಂದು ಅಯ್ಯಕಣ್ಣು ಹೇಳಿದರು. ಈ ಮೊದಲು ಪ್ರತಿಭಟನೆಗೆ ಅವಕಾಶ ನೀಡದಿದ್ದರೂ ನಂತರ ನ್ಯಾಯಾಲಯದ ಅನುಮತಿ ಪಡೆದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಪ್ರತಿಭಟನೆಯ ವೇಳೆ ಕೆಲವು ರೈತರು ಮೊಬೈಲ್ ಟವರ್ ಮತ್ತು ಮರಗಳನ್ನು ಹತ್ತಿದ್ದಾರೆ. ನೇಗಿಲು ಮತ್ತು ಧ್ವಜಗಳೊಂದಿಗೆ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ಸಹ ತಂದಿದ್ದಾರೆ. ಇದು ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ತಲೆ ಬುರುಡೆಗಳು ಎಂದು ಅವರು ಹೇಳಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!