Sunday, April 28, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಸಮಸ್ಯೆ ಬಗೆಹರಿಸಲಿ

ಸಾರ್ವಜನಿಕರ ಕಷ್ಟಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆಗೆ ಎಂಬ ಕಾರ್ಯಕ್ರಮ ರೂಪಿಸಲಾಗಿದ್ದು,ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಸಾರ್ವಜನಿಕರ ಕಷ್ಟಗಳನ್ನು ಪರಿಹರಿಸಲು ಸಾಧ್ಯ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ತಿಳಿಸಿದರು.

ಅವರಿಂದು ನಾಗಮಂಗಲ ತಾಲ್ಲೂಕಿನ ಕಾಳಿಂಗನಹಳ್ಳಿಯಲ್ಲಿ‌ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರ ಕೆಲಸಗಳು ಸರ್ಕಾರಿ ಕಚೇರಿಯಲ್ಲಿ ಕ್ರಮಬದ್ಧವಾಗಿ ನಿರ್ವಹಣೆಯಾಗಿ ವಿಲೇವಾರಿಯಾಗಬೇಕು.ವಿಳಂಬವಾದರೆ ಸಾರ್ವಜನಿಕರು ಜನಪ್ರತಿನಿಧಿಗಳನ್ನು ದೂರುತ್ತಾರೆ. ಗ್ರಾಮ ಮಟ್ಟದ ಅಧಿಕಾರಿಗಳು ರಸ್ತೆ, ಚರಂಡಿ, ಕುಡಿಯುವ ನೀರು, ಪಿಂಚಣಿ, ವಿದ್ಯುತ್, ಕುಡಿಯುವ ನೀರು ಮುಂತಾದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬಹುದಾಗಿದೆ‌.ಅಧಿಕಾರಿಗಳು ಸಣ್ಣ ಸಮಸ್ಯೆಗಳಿಗೆ ಜನರನ್ನು ಸರ್ಕಾರಿ ಕಚೇರಿಗೆ ಅಲೆದಾಡುವಂತೆ ಮಾಡಬೇಡಿ ಎಂದರು.

ಸರ್ಕಾರಿ ಕಚೇರಿಗಳಿಗೆ ಉದಾಹರಣೆಗೆ 500 ಅರ್ಜಿಗಳಿದ್ದರೆ, ಮೊದಲ ಅರ್ಜಿ ವಿಲೇವಾರಿ ಆಗಿರುವುದಿಲ್ಲ‌ 300 ನೇ ಅರ್ಜಿ ವಿಲೇವಾರಿಯಾಗಿರುತ್ತದೆ. ಇದು ಹಲವಾರು ಅನುಮಾನಕ್ಕೆ ಆಸ್ಪದ ಮಾಡಿಕೊಡುತ್ತದೆ. ಬರುವ ಅರ್ಜಿಗಳನ್ನು ನಿಗದಿಪಡಿಸಿದ ಸಮಯದಲ್ಲಿ ಸರಿಯಾಗಿ ವಿಲೇವಾರಿ ಮಾಡಿ ಎಂದರು.

ಜಿಲ್ಲಾಧಿಕಾರಿ ಎಸ್. ಅಶ್ವತಿ ಅವರು ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ. ಅಧಿಕಾರಿಗಳ,ಸಿಬ್ಬಂದಿಗಳು ಮನೆಮನೆಗೆ ಭೇಟಿ ಮಾಡಿ ಜನರೊಂದಿಗೆ ಚರ್ಚಿಸಿದರೆ, ಅವರಿಗೆ ಯಾವ ಸೌಲಭ್ಯ ದೊರೆತಿದೆ, ಯಾವ ಸೌಲಭ್ಯಕ್ಕೆ ಅರ್ಹರು ಎಂದು ತಿಳಿಯುತ್ತದೆ ಎಂದರು.

ಗ್ರಾಮಸ್ಥರು ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿಗೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು. ಚರಂಡಿ ಸ್ವಚ್ಛತೆ ಹಾಗೂ ಕೆರೆಯ ಸ್ವಚ್ಛತೆ ಕುರಿತಂತೆ ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ಜನಸಾಮಾನ್ಯರು ಕೂಡ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಬೇಕು ಎಂದರು.

ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು ಸಹಕರಿಸಬೇಕೆಂದು ಮನೆ ಮನೆಗೆ ತೆರಳಿ ಬಟ್ಟೆ ಬ್ಯಾಗ್ ಗಳನ್ನು ವಿತರಿಸಿ ಅರಿವು ಮೂಡಿಸಿದರು.

ಸಾರ್ವಜನಿಕರಿಗೆ ದೊರಕುವ ಸವಲತ್ತುಗಳನ್ನು ಒದಗಿಸುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಸಾಧನೆ ಮಾಡಲು ಸ್ಪೂರ್ತಿಯಾಗುತ್ತದೆ ಎಂದರು.

ಸಾರ್ವಜನಿಕರಿಂದ ದೂರು ಸ್ವೀಕರಿಸಲು ತೆರೆಯಲಾಗಿದ್ದ ಕೌಂಟರ್ ಪರಿಶೀಲಿಸಿ, ಮುಂದಿನ ಬಾರಿ ಕಂದಾಯ ಇಲಾಖೆ, ಪಂಚಾಯತ್ ರಾಜ್ ಹಾಗೂ ಇತರೆ ಇಲಾಖೆಗೆ ಪ್ರತ್ಯೇಕವಾಗಿ ಕೌಂಟರ್ ತೆರೆಯುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆರೋಗ್ಯ ಇಲಾಖೆ ವತಿಯಿಂದ ಕಣ್ಣಿನ ತೊಂದರೆ ಇರುವವರಿಗೆ ಕನ್ನಡಕ ವಿತರಿಸಲಾಯಿತು. ಕೃಷಿ ಇಲಾಖೆಯಿಂದ ಟಾರ್ಪಲ್ ಹಾಗೂ ಇಳುವರಿ ಹೆಚ್ಚಿಸುವ ಹೊಸ ತಳಿ ಕಿಟ್ ಅನ್ನು ರೈತರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ನಾಗಮಂಗಲ ತಹಶೀಲ್ದಾರ್ ನಂದೀಶ್, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!