Sunday, May 19, 2024

ಪ್ರಾಯೋಗಿಕ ಆವೃತ್ತಿ

‘ಅನ್ಯಾಯ ನೋಡ್ಕೊಂಡು ಹೇಗೆ ಸುಮ್ನೀರೋದು ಸಾರ್” : ಸಚಿವರಿಗೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪ್ರಶ್ನೆ

”ಅನ್ಯಾಯ ನೋಡ್ಕಂಡು ಹೇಗೆ ಸುಮ್ನೀರೋದು ಸಾರ್” ದಿನನಿತ್ಯ ಮುಖ್ಯ ಶಿಕ್ಷಕ ಚಿನ್ಮಯಾನಂದಮೂರ್ತಿಯ  ಕಿರುಕುಳವನ್ನು ನೋಡಿ ಸಾಕಾಗಿದೆ ಎಂದು ಪಾಂಡವಪುರ ತಾಲ್ಲೂಕಿನ ಕಟ್ಟೇರಿಯ ಹಾಸ್ಟೆಲ್ ವಿದ್ಯಾರ್ಥಿನಿಯರು ಸಚಿವ ಕೆ.ಗೋಪಾಲಯ್ಯ ಅವರ ಎದುರು ಅಲ್ಲಿ ನಡೆಯುತ್ತಿದ್ದ ಕಿರುಕುಳವನ್ನು ಬಿಚ್ಚಿಟ್ಟರು.

ಗುರುವಾರ ಸಚಿವರು ಪಾಂಡವಪುರ ತಾಲ್ಲೂಕಿನ ಕಟ್ಟೇರಿಯ ಆರ್.ಎಂ.ಎಸ್.ಎ ಹಾಸ್ಟೆಲ್ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಂಡರು.

ವಿದ್ಯಾರ್ಥಿನಿಯರು ಹೇಳಿದ್ದಿಷ್ಟು 

ಮುಖ್ಯಶಿಕ್ಷಕನ ನೀಚ ಬುದ್ದಿಯನ್ನ ನಿನ್ನೆ ಬೆಳಿಗ್ಗೆಯೆ ವಾರ್ಡನ್ ಗಮನಕ್ಕೆ ತಂದಿದ್ವಿ. ಅವರು ಪೊಲೀಸರಿಗೆ ಮಾಹಿತಿ ನೀಡ್ತೀನಿ ಎಂದಿದ್ರು. ಮೇಡಂ ಪೊಲೀಸರಿಗೆ ತಿಳಿಸಿದ್ರೊ, ಇಲ್ವೋ ಗೊತ್ತಿಲ್ಲ. ಹಿಂದಿನಿಂದಲೂ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡ್ತಿದ್ರು, ನಿನ್ನೆ ರಾತ್ರಿಯು ಆತ ಬರ್ತಾನೆ, ನಮ್ಮ ಜೊತೆ ಅನುಚಿತ ವರ್ತನೆ ಮಾಡ್ತಾನೆ ಎಂಬುದು ಗೊತ್ತಿತ್ತು. ಅದಕ್ಕಾಗಿಯೆ ಕೋಲನ್ನು(ದೊಣ್ಣೆ) ತೆಗೆದುಕೊಂಡು ಬಂದು ಇಟ್ಕೊಂಡಿದ್ವಿ.
ಅದೇ ರೀತಿ ನಿನ್ನೆ ರಾತ್ರಿ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ತೋರಿಸಿದ ಕಾಮುಕ. ಆ‌ ಅನ್ಯಾಯ ನೋಡಲಾಗದೆ ಎಲ್ಲರು ಸೇರಿ ಹೊಡೆಯಬೇಕಾಯ್ತು ಎಂದ ವಿದ್ಯಾರ್ಥಿನಿಯರು ವಿವರಿಸಿದರು.

ಆಗ ಸಚಿವರು, ”ನಿಮಗೆ ಪ್ರಶಸ್ತಿಯನ್ನು ನೀಡಬೇಕು. ದುಷ್ಟ ಶಿಕ್ಷಕನಿಗೆ ಸರಿಯಾದ ಪಾಠ ಕಲಿಸಿದ್ದೀರಿ, ಧೈರ್ಯ ಮಾಡಿ ದೂರು ಕೊಟ್ಟಿದ್ದೀರಿ, ಕಿತ್ತೂರು ರಾಣಿ ಚೆನ್ನಮ್ಮನಂತೆ ಹೊರಟಕ್ಕೀಳಿದಿದ್ದೀರಿ” ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ವಿದ್ಯಾರ್ಥಿನಿಯ ಹಾಸ್ಟೆಲ್ ಗೆ ಪುರುಷ ಅಧಿಕಾರಿಗಳು ನೇಮಕವಾಗದಂತೆ ನೋಡಿಕೊಳ್ಳಿ, ಆದಷ್ಟು ಮಹಿಳೆಯರನ್ನೇ ನೇಮಕ ಮಾಡುವಂತೆ ತಿಳಿಸಿದರು. ಅಲ್ಲದೇ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಿ ಎಂದು ತಿಳಿಸಿದರು.

ಸಾಕ್ಷ್ಯಗಳು ನಾಶವಾಗದಂತೆ ಎಚ್ಚರವಹಿಸಿ 

ಕಾಮುಕ ಮುಖ್ಯಶಿಕ್ಷಕ ಚಿನ್ಮಯಾನಂದಮೂರ್ತಿ ನಡೆಸಿ  ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿಗಳು ನಾಶವಾಗದಂತೆ ಎಚ್ಚರ ವಹಿಸಿ ಎಂದು ಸಚಿವರು, ಮಂಡ್ಯ ಜಿ.ಪಂ.ನಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆದರು. ಸಭೆ ನಂತರ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲ ಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!