Tuesday, April 30, 2024

ಪ್ರಾಯೋಗಿಕ ಆವೃತ್ತಿ

ಇವತ್ತು ಜಿಬ್ರಾನ್ ನ ಹುಟ್ಟುಹಬ್ಬ

ನಿನ್ನೆ ಸಂಜೆ,
ದೇವಸ್ಥಾನದ ಕಟ್ಟೆಯ ಮೇಲೆ
ಹೆಂಗಸೊಬ್ಬಳು ಕುಳಿತಿದ್ದಳು
ಇಬ್ಬರು ಗಂಡಸರ ನಡುವೆ.
ಅವಳ ಮುಖದ ಒಂದು ಭಾಗ
ಬಿಳಚಿಕೊಂಡಿತ್ತು
ಇನ್ನೊಂದು ಭಾಗ ನಾಚಿಕೊಂಡಿತ್ತು.

————-

ಬೆಳ ಬೆಳಿಗ್ಗೆ
ತನ್ನ ನೆರಳು ನೋಡಿಕೊಂಡ
ತೋಳವೊಂದು
ತನಗೆ ತಾನೇ ಹೇಳಿಕೊಂಡಿತು.
ಇವತ್ತು ಮಧ್ಯಾಹ್ನದ ಊಟಕ್ಕೆ
ಒಂದು ಒಂಟೆ ಬೇಕೇ ಬೇಕು

ಒಂಟೆಗಾಗಿ
ಸುತ್ತೆಲ್ಲ ಹುಡುಕಿತು.
ಸೂರ್ಯ ನೆತ್ತಿಗೇರುತ್ತಿದ್ದಂತೆಯೇ
ಮತ್ತೊಮ್ಮೆ ತನ್ನ ನೆರಳ ನೋಡಿ
ಗೊಣಗಿಕೊಂಡಿತು

ಒಂದು ಇಲಿ ಸಿಕ್ಕಿದ್ದರೆ ಸಾಕಿತ್ತೇನೋ.

—————

ಒಂದು ಹುಣ್ಣಿಮೆ ರಾತ್ರಿ,
ಚಂದ್ರ
ತನ್ನ ಪೂರ್ಣ ಧಿಮಾಕಿನೊಡನೆ
ಆಕಾಶದಲ್ಲಿ ಪ್ರತ್ಯಕ್ಷನಾದ.
ಆ ಊರಿನ ನಾಯಿಗಳೆಲ್ಲ
ಚಂದ್ರನನ್ನು ಕಂಡು ಬೊಗಳತೊಡಗಿದವು,
ಒಂದು ನಾಯಿಯನ್ನು ಮಾತ್ರ ಬಿಟ್ಟು.
ಆವರೆಗೆ ಸುಮ್ಮನಿದ್ದ ನಾಯಿ
ತನ್ನ ಗೆಳೆಯರಿಗೆ ಹೇಳತೊಡಗಿತು,

ಗೆಳೆಯರೇ,
ನಿಮ್ಮ ಬೊಗಳುವಿಕೆಯಿಂದ
ಈ ಪ್ರಶಾಂತತೆಯನ್ನು ಹಾಳುಮಾಡಬೇಡಿ,
ನೀವು ಬೊಗಳಿದ ಮಾತ್ರಕ್ಕೆ
ಚಂದ್ರನೇನು ಭೂಮಿಗಿಳಿದು ಬರುವದಿಲ್ಲ.

ಆಮೇಲೆ
ಎಲ್ಲ ನಾಯಿಗಳು
ಬೊಗಳುವುದನ್ನ ನಿಲ್ಲಿಸಿದವು.
ಆದರೆ
ಮೊದಲು ಸುಮ್ಮನಿದ್ದ ನಾಯಿ ಮಾತ್ರ
ಬೊಗಳುತ್ತಲೇ ಹೋಯಿತು
ಮೌನದ ಮಹತ್ವದ ಬಗ್ಗೆ
ಇಡೀ ರಾತ್ರಿ.

ಚಿದಂಬರ ನರೇಂದ್ರ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!