Tuesday, May 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯಕ್ಕೆ ಸಾಪ್ಟ್ ವೇರ್ ಪಾರ್ಕ್; ಮಳವಳ್ಳಿಗೆ ನಗರಸಭೆ| ಸಕ್ಕರೆಜಿಲ್ಲೆಗೆ ಕಾಂಗ್ರೆಸ್ ನೀಡಿದ ಭರವಸೆಗಳೇನು ?

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ಕಾಂಗ್ರೆಸ್ ಪಕ್ಷವು ಪ್ರತ್ಯೇಕ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೃಷ್ಣರಾಜನಗರಕ್ಕೆ ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರ, ಪ್ರವಾಸೋದ್ಯಮ ಅಭಿವೃದ್ಧಿ, ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಸೇತುವೆಗಳ ನಿರ್ಮಾಣ, ಉದ್ಯಾನಗಳ ನಿರ್ಮಾಣ ಹಾಗೂ ಕ್ರೀಡಾಂಗಣ ಅಭಿವೃದ್ಧಿಗೆ ಅದ್ಯತೆ  ನೀಡಲಾಗುವುದು ಎಂದು ಭರವಸೆ ನೀಡಿದರು.

ಮದ್ದೂರು ಪಟ್ಟಣ ನವೀಕರಣಕ್ಕೆ ಆದ್ಯತೆ

ಮದ್ದೂರು ವಿಧಾಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮದ್ದೂರು ಪಟ್ಟಣ ನವೀಕರಣಕ್ಕೆ ಆದ್ಯತೆ, ಒಳಚರಂಡಿ ವ್ಯವಸ್ಥೆ, ತಾಲ್ಲೂಕಿನ ಕಡೆ ಭಾಗದ ರೈತರಿಗೆ ಸಮರ್ಪಕ ನೀರು, ಕೈಗಾರಿಕೆ ಸ್ಥಾಪನೆ ಹಾಗೂ ಕುಡಿಯುವ ನೀರಿಗೆ ಆದ್ಯತೆ ಕೊಡಲಾಗುವುದು ಎಂದ ಅವರು, ಕೆ.ಆರ್.ಪೇಟೆ ವಿಧಾಸಭಾ ಕ್ಷೇತ್ರದ ಶ್ರೀರಂಗಪಟ್ಟಣ- ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿ, ಗ್ರಾಮಗಳಿಗೆ ರಸ್ತೆ ನಿರ್ಮಾಣ, ಹೇಮಾವತಿ, ಮಾದಾಪುರ, ಅಕ್ಕ ಹೆಬ್ಬಾಳ ನಾಲೆ ಆಧುನೀಕರಣ, ಕೆ.ಆರ್.ಪೇಟೆಯಿಂದ ಬೆಂಗಳೂರು, ಮಂಗಳೂರಿಗೆ ರೈಲ್ವೆ ಸಂಪರ್ಕ ಒದಗಿಸಿಕೊಡಲಾಗುವುದು ಎಂದು ಪ್ರಣಾಳಿಕೆ ಮೂಲಕ ತಿಳಿಸಿದರು.

ಮಳವಳ್ಳಿ ನಗರಸಭೆಯಾಗಿ ಮೇಲ್ದರ್ಜೆಗೆ

ಮಳವಳ್ಳಿ ವಿಧಾಸಭಾ ಕ್ಷೇತ್ರಕ್ಕೆ ಸಂಬಧಿಸಿದಂತೆ ಮಳವಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು, ನೀರಾವರಿ ಯೋಜನೆಯಡಿ ೩೦ ಸಾವಿರ ವಾಣಿಜ್ಯ ಬೆಳೆಗಳಿಗೆ ಹಾಗೂ ಬಿ.ಜಿ.ಪುರ, ಇಗ್ಗಲೂರಿಗೆ ಹನಿ ನೀರಾವರಿ ಯೋಜನೆ ತರಲಾಗುವುದು, ಬೆಳಕವಾಡಿ, ಹಲಗೂರಿನಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ, ಮಳವಳ್ಳಿಯಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಒತ್ತು ನೀಡಿ, ಗಾರ್ಮೆಂಟ್ಸ್ ನಿರ್ಮಾಣಕ್ಕೆ 350 ಎಕರೆ ಜಾಗ ಗುರುತಿಸಿದ್ದು, ಆ ಸ್ಥಳದಲ್ಲಿ ಶೀಘ್ರದಲ್ಲೇ ಗಾರ್ಮೆಂಟ್ಸ್ ಕಾರ್ಖಾನೆ ತೆರೆಯಲು ಆದ್ಯತೆ ಮತ್ತು ಮಳವಳ್ಳಿ, ಕಿರುಗಾವಲು, ಹಲಗೂರಿಗೆ ಕುಡಿಯಲು ಕಾವೇರಿ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಾಗಮಂಗಲ; ಕರೆ ತುಂಬಿಸುವ ಯೋಜನೆಗೆ ಒತ್ತು

ನಾಗಮಂಗಲ ವಿಧಾಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀರಾವರಿ ಯೋಜನೆಯಡಿ ತಾಲ್ಲೂಕಿನ ಕರೆ ತುಂಬಿಸುವ ಯೋಜನೆಗೆ ಒತ್ತು, ಹೇಮಾವತಿ ಜಲಾಶಯದಿಂದ ಕುಡಿಯುವ ನೀರು ಯೋಜನೆ ಜಾರಿಗೆ ತರಲಾಗುವುದು, ತಾಲ್ಲೂಕಿನಲ್ಲಿ ಗಾರ್ಮೆಂಟ್ಸ್ ಸ್ಥಾಪಿಸಿ, ಉದ್ಯೋಗ ಸೃಷ್ಟಿ, ನಾಲೆಗಳ ಆಧುನೀಕರಣ ಹಾಗೂ ರೈತರ ಬೆಳೆಗಳನ್ನು ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಮೇಲುಕೋಟೆ: ಪಂಚಾಯ್ತಿಗೊಂದು ಶಾಲೆ

ಪಾಂಡವಪುರ (ಮೇಲುಕೋಟೆ ವಿಧಾನಸಭಾ ಕ್ಷೇತ್ರ) ತಾಲ್ಲೂಕಿಗೆ ಸಂಬಂಧಿಸಿದಂತೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಿಂದ ಪಂಚಾಯ್ತಿಗೊಂದು ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡಲಾಗುವುದು, ರೈತರ ಬದುಕು ಹಸನು ಮಾಡುವ ಸಲುವಾಗಿ ರೈತರನ್ನು ಬರಗಾಲದಿಂದ ಪಾರು ಮಾಡಲು ಚೆಕ್ ಡ್ಯಾಂಗಳ ನಿರ್ಮಾಣ, ನೀರು ಸಂಗ್ರಹಣೆ, ಹವಾಮಾನ ವೈಪರೀತ್ಯ ಎದುರಿಸಲು ಅರಣ್ಯೀಕರಣ, ಪರಿಸರ ಸಂರಕ್ಷಣೆ, ಬಹು ಬೆಳೆ ವೈಜ್ಞಾನಿಕ ಪದ್ಧತಿ ಅಳವಡಿಕೆ ಮಾಡಿಕೊಳ್ಳಲು ರೈತರಿಗೆ ಉತ್ತೇಜನ, ಆರ್ಥಿಕ ಸ್ವಾವಲಂಬಿಗಳನ್ನಾಗಿ ರೈತರನ್ನು ಮಾಡಲು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಶ್ರೀರಂಗಪಟ್ಟಣ: ಪ್ರವಾಸೋದ್ಯಮಕ್ಕೆ ಒತ್ತು

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪ್ರವಾಸೋದ್ಯಮಕ್ಕೆ ಒತ್ತು ಕೊಡಲಾಗುವುದು. ಐತಿಹಾಸಿಕ ಹಿನ್ನಲೆಯುಳ್ಳ ಪ್ರತಿ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಿ, ಮೂಲಭೂತ ಸೌಕರ್ಯ ಒದಗಿಸಲಾಗುವುದು. ತಾಲ್ಲೂಕಿನ ನಾಲೆಗಳಾದ ಸಿಡಿಎಸ್, ಮಿರ್ಜಾ ನಾಲೆಗಳ ನವೀಕರಣ, ಉಪ- ನಾಲೆಗಳ ನಿರ್ಮಾಣ, ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಮೂಲಸೌಕರ್ಯವನ್ನು ಒದಗಿಸಲಾಗುವುದು ಎಂದು ವಿವರಿಸಿದರು.

ಮಂಡ್ಯ: ಸಾಫ್ಟ್ವೇರ್ ಪಾರ್ಕ್ ನಿರ್ಮಾಣ

ಮಂಡ್ಯ ವಿಧಾಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಫ್ಟ್ವೇರ್ ಪಾರ್ಕ್ ನಿರ್ಮಾಣ, ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ, ಮೆಡಿಕಲ್ ಕಾಲೇಜು ಉನ್ನತೀಕರಣ, ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ, ವಸತಿ ಹೀನರಿಗೆ 10ಸಾವಿರ ಮನೆ ನಿರ್ಮಾಣ, ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ, ಶ್ರೀರಂಗಪಟ್ಟಣದಿಂದ ಬಸರಾಳಿಗೆ ಕುಡಿಯುವ ನೀರು ಯೋಜನೆ, ಬಸರಾಳಿನಲ್ಲಿ ಏತ ನೀರಾವರಿ ಯೋಜನೆ, ಕೋಣನಹಳ್ಳಿ, ಗುತ್ತಲು ಕೆರೆಯನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು.

ಮಂಡ್ಯ ನಗರದಲ್ಲಿ20 ಸಾವಿರ ಉದ್ಯೋಗ ಸೃಷ್ಟಿಗೆ ಜವಳಿ ಪಾರ್ಕ್ ಸ್ಥಾಪನೆ, ೫೦ ಹಾಸಿಗೆ ಗುಣಮಟ್ಟದ ಆಸ್ಪತ್ರೆ ನಿರ್ಮಾಣ, ಸಾತನೂರಿನಲ್ಲಿ ದೇವಲಾಂಬ ದೇಗುಲದ ಅಭಿವೃದ್ಧಿ, ಮಂಡ್ಯ ನಗರಕ್ಕೆ ಹಳೆ ಒಳಚರಂಡಿಗೆ ಹೊಸ ವ್ಯವಸ್ಥೆ ಜೋಡಣೆ, ಮಂಡ್ಯ ತಾಲ್ಲೂಕಿನ ಕೆರೆಗಳ ಹೂಳೆತ್ತಿ ನೀರು ಸಂಗ್ರಹಕ್ಕೆ ಕ್ರಮವಹಿಸಲಾಗುವುದು ಎಂದ ಅವರು, ಈ ಎಲ್ಲ ಯೋಜನೆಗಳ ಜಾರಿಗೆಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು) ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಗೋಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ದಿನೇಶ್‌ಗೂಳಿಗೌಡ, ರವಿಕುಮಾರ್ ಗಣಿಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!