Friday, June 21, 2024

ಪ್ರಾಯೋಗಿಕ ಆವೃತ್ತಿ

ಸಮಸ್ಯೆಗಳನ್ನು ಬಗೆಹರಿಸಲು ಮೈತ್ರಿ ಮಾಡಿಕೊಂಡಿದ್ದೇನೆಯೇ ಹೊರತು, ಸ್ವಾರ್ಥಕ್ಕಲ್ಲ: ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲು ಮೈತ್ರಿ ಮಾಡಿಕೊಂಡಿದ್ದೇನೆಯೇ ಹೊರತು, ನನ್ನ ಸ್ವಾರ್ಥಕ್ಕಾಗಲ್ಲ. 20 ವರ್ಷಗಳಿಂದ ಮಂಡ್ಯ ಜಿಲ್ಲೆಯ ಜನರ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದೇನೆ. ಮೋಸ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಶ್ರೀರಂಗಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜಾ.ದಳ-ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲೆಂದೇ ಶ್ರೀರಂಗನಾಥಸ್ವಾಮಿಯೇ ನನ್ನನ್ನು ಕರೆತಂದು ಮಂಡ್ಯದಲ್ಲಿ ನಿಲ್ಲಿಸಿದ್ದಾನೆ. ಅವುಗಳನ್ನು ಪೂರ್ಣಗೊಳಿಸುವುದೇ ನನ್ನ ಗುರಿಯಾಗಿದೆ ಎಂದರು.

ಹಲವು ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ಕಾವೇರಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆಯನ್ನು ಎಚ್.ಡಿ. ದೇವೇಗೌಡ ಅವರ ಜೀವಿತಾವಧಿಯಲ್ಲೇ ಪೂರ್ಣಗೊಳಿಸಲಾಗುವುದು. ಅವುಗಳನ್ನು ಪೂರ್ಣಗೊಳಿಸದಿದ್ದರೆ ಇನ್ನೆಂದೂ ಮತ ಕೇಳಲು ನಿಮ್ಮ ಮುಂದೆ ಬರಲ್ಲ ಎಂದರು.

ಬಿಡಿಗಾಸನ್ನೂ ಕೊಟ್ಟಿಲ್ಲ

ಕೇಂದ್ರದಲ್ಲಿ ಸುಮಾರು 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಒಂದು ಬಿಡಿಗಾಸನ್ನೂ ಕೊಟ್ಟಿಲ್ಲ. 1977ರ ವರೆಗೂ ರಾಜ್ಯದಿಂದ 28ಕ್ಕೆ 28 ಸ್ಥಾನಗಳಲ್ಲೂ ಕಾಂಗ್ರೆಸ್ ಸಂಸದರನ್ನು ಕಳುಹಿಸಿದರೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿಲ್ಲ. ಹೋಗಲಿ ಕಾವೇರಿ ಸಮಸ್ಯೆಯನ್ನಾದರೂ ಬಗೆಹರಿಸಿದರಾ? ಅದೂ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ವೈಯಕ್ತಿಕವಾಗಿ ಸಹಾಯ ನೀಡಿದ್ದೇನೆ

ಇದೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯಲ್ಲಿ 200 ರೈತರು ಆತ್ಮಹತ್ಯೆ ಮಾಡಿಕೊಂಡರು. ನಾನು ಅಧಿಕಾರದಲ್ಲಿ ಇರದಿದ್ದರೂ ಪ್ರತಿ ರೈತರ ಮನೆಗೆ ಭೇಟಿ, ವೈಯಕ್ತಿಕವಾಗಿ ಸಹಾಯ ಮಾಡಿ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. 2018ರಲ್ಲಿ ಪೂರ್ಣ ಬಹುಮತ ಇಲ್ಲದಿದ್ದರೂ ರೈತರಿಗೆ ಭರವಸೆ ನೀಡಿದಂತೆ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. 750 ಕೋಟಿ ರೂ. ಮಂಡ್ಯ ಜಿಲ್ಲೆಯ ರೈತರ ಸಾಲ ಮನ್ನಾ ಆಗಿದೆ. ಇಷ್ಟಿದ್ದರೂ ನಮ್ಮಿಂದ ದೂರ ಹೋಗಿರುವ ಮಹಾನ್ ನಾಯಕರು ಈ ರಾಜ್ಯಕ್ಕೆ, ಮಂಡ್ಯ ಜಿಲ್ಲೆಗೆ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಕೊಡುಗೆ ಏನೆಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಹಾಸನ ಜನ್ಮ ಕೊಟ್ಟ ಜಿಲ್ಲೆಯಾದರೆ, ರಾಮನಗರ ರಾಜಕೀಯವಾಗಿ ಗುರುತಿಸಿಕೊಂಡ ಜಿಲ್ಲೆಯಾಗಿದೆ. ಮಂಡ್ಯ ರಾಜಕೀಯವಾಗಿ ಶಕ್ತಿ ನೀಡಿದ ಜಿಲ್ಲೆ. ನಾನು ಎಲ್ಲೇ ಹೋದರೂ ಇದನ್ನು ನಾನು ಸ್ಮರಿಸುತ್ತೇನೆ. ರಾಜಕಾರಣದಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆಸಿದ ಜನತೆಗೆ ದ್ರೋಹ ಮಾಡುವುದಿಲ್ಲ, ನಿಮಗೆ ದ್ರೋಹ ಮಾಡಿದರೆ ದೇವರಿಗೆ ದ್ರೋಹ ಮಾಡಿದಂತೆ, ನಿಮ್ಮ ಧ್ವನಿಯಾಗಿ ನಾನು ನಿಲ್ಲಲಿದ್ದೇನೆ, ಯುವ ಜನರ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ರೂಪಿಸಲು ಮುಂದಾಗುವುದರ ಜೊತೆಗೆ ಯುವ ಜನತೆ ಸ್ವಂತ ದುಡಿಮೆಯಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗುತೇನೆ. ರೈತರ ಬೆಳಗೆ ಸೂಕ್ತ ಬೆಲೆ, ಕೃಷಿಗೆ ನೆರವು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಬಹಿರಂಗ ಸಭೆಯಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಬಂಡೆಪ್ಪ ಕಾಶೆಂಪುರ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಬಿಜೆಪಿ ಮುಖಂಡರಾದ ಎಸ್.ಸಚ್ಚಿದಾನಂದ, ಡಾ. ಸಿದ್ದರಾಮಯ್ಯ, ಕೇಂದ್ರ ವಕ್ಫ್ ಸಮಿತಿ ಮಾಜಿ ಸದಸ್ಯ ಅಬ್ಬಾಸ್ ಆಲಿ ಬೊಹ್ರಾ, ಡಾ. ಎಚ್.ಎನ್. ರವಿಂದ್ರ, ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್.ಇಂದ್ರೇಶ್, ತಾಲ್ಲೂಕು ಜಾ.ದಳ ಅಧ್ಯಕ್ಷ ದಶರಥ, ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!