Tuesday, May 14, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭೆ| ಮಹಿಳಾ ಮತದಾರರೇ ಹೆಚ್ಚು; ಒಟ್ಟು ಮತದಾರರ ಸಂಖ್ಯೆ 17,79,239

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 168 ಮಂದಿ ಲಿಂಗತ್ವ ಅಲ್ಪಸಂಖ್ಯಾತ ಮತದಾರರು, 8,76,112 ಪುರುಷರು ಹಾಗೂ 9,02,959 ಮಹಿಳೆಯರು ಸೇರಿದಂತೆ ಒಟ್ಟು 17,79,239 ಮತದಾರರಿದ್ದಾರೆಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಘೋಷಣೆ ಬಳಿಕ ಮತದಾರರ ಪಟ್ಟಿಗೆ 20,064 ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದು, ಇದರೊಂದಿಗೆ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,79,239ಕ್ಕೇರಿದೆ ಎಂದರು.

ಹೊಸದಾಗಿ ನೊಂದಣಿಯಾದ ಮತದಾರರ ಪೈಕಿ 13,188 ಮಂದಿಗೆ ಎಪಿಕ್ ಕಾರ್ಡ್ಗಳನ್ನು(ಮತದಾರರ ಗುರುತಿನ ಚೀಟಿ) ಅಂಚೆ ಇಲಾಖೆ ಮೂಲಕ ಕಳುಹಿಸಲಾಗಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯ 15,60,452 ಮಂದಿಗೆ ನೀಡಲು ಈಗಾಗಲೇ ವೋಟರ್ ಸ್ಲಿಪ್‌ಗಳನ್ನು ಮುದ್ರಿಸಲಾಗಿದ್ದು, ಅವುಗಳನ್ನು ಮತದಾನಕ್ಕೆ 10 ದಿನ ಮುಂಚಿತವಾಗಿ ಗ್ರಾಮ ಆಡಳಿತಾಧಿಕಾರಿ/ಗ್ರಾಮ ಸಹಾಯಕ/ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ಮತದಾರರ ಮನೆಮನೆಗೆ ತಲುಪಿಸಲಾಗುವುದು ಎಂದು ವಿವರಿಸಿದರು.

ವೇತನ ಸಹಿತ ರಜೆ

ಮತದಾನ ದಿನದವಾದ ಏ.26ರಂದು ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ತೆಗಳಲ್ಲಿ ದಿನಗೂಲಿ ಅಥವಾ ಕಾಯಂ ಆಗಿ ಕೆಲಸ ಮಾಡುತ್ತಿರುವ ನೌಕರರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ. ಇದನ್ನು ನಿರ್ಬಂಧಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

25,673 ಮಂದಿ ವಿಶೇಷಚೇತನ ಮತದಾರರು

ಒಟ್ಟು ಮತದಾರರಲ್ಲಿ 23,044 ಮಂದಿ 85ಕ್ಕಿಂತ ಹೆಚ್ಚು ವಯಸ್ಸಿನವರು ಹಾಗೂ 25,673 ಮಂದಿ ವಿಶೇಷಚೇತನ ಮತದಾರರಿದ್ದಾರೆ. ಇಷ್ಟೂ ಮಂದಿಗೆ ಮನೆಯಲ್ಲೇ ಕುಳಿತು ಮತದಾನ ಮಾಡಲು ಅನುಕೂಲವಾಗುವಂತೆ ಫಾರಂ 12ಡಿ ವಿತರಿಸಲಾಗಿದೆ. ಶೇ.40ರಷ್ಟು ಅಂಗವಿಕಲತೆ ಹೊಂದಿದವರಿಗೆ ಮಾತ್ರ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ 2569 ಮಂದಿ 85 ವರ್ಷ ಮೇಲ್ಪಟ್ಟವರು, 1075 ಮಂದಿ ವಿಶೇಷಚೇತನರು ಮನೆಯಲ್ಲೇ ಮತದಾನ ಮಾಡಲು ಸಮ್ಮತಿಸಿದ್ದಾರೆ ಎಂದರು.

ಅಂಚೆ ಮತದಾನಕ್ಕೆ ಅವಕಾಶ

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 901 ಮಂದಿ ಸೇವಾ ಮತದಾರರಿದ್ದಾರೆ. ಇವರಿಗೆ ಇಟಿಪಿಬಿಎಸ್ ತಂತ್ರಾಂಶದ ಮೂಲಕ ಮತ ಚಲಯಿಸಲು ಅವಕಾಶ ಕಲ್ಪಿಸಲಾಗುವುದು. ನಾಮಪತ್ರ ಹಿಂಪಡೆಯುವಿಕೆ ಅವಧಿ ಮುಗಿದು, ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯಾದ 24 ಗಂಟೆಯೊಳಗೆ ಸೇವಾ ಮತದಾರರಿಗೆ ಇಟಿಪಿಬಿಎಸ್ ತಾಂತ್ರಾಂಶದ ಮೂಲಕ ಮತಪತ್ರ ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಇದಲ್ಲದೆ ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾನಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗೂ ಅಂಚೆ ಮತದಾನಕ್ಕೆ ಅವಕಾಶ ನೀಡಲಗಿದೆ. ಕ್ಷೇತ್ರದಲ್ಲಿ 1017 ಮಂದಿ ನಾನಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ ಚಲಾಯಿಸಲು ಅನುಕೂಲವಾಗುಂತೆ ನಗರದಲ್ಲಿ ಏ.16ರಿಂದ ಮೂರು ದಿನಗಳ ಪೋಸ್ಟರ್ ವೋಟಿಂಗ್ ಸೆಂಟರ್ ತೆರೆಯಲಾಗುವುದು. ಈ ಸೆಂಟರ್‌ಗೆ ಬಂದು ಅರ್ಹರು ಮತ ಚಲಾಯಿಸಬಹುದು ಎಂದು ಹೇಳಿದರು.

693 ಕ್ರಿಟಿಕಲ್ ಮತಗಟ್ಟೆಗಳು

ಕ್ಷೇತ್ರ ವ್ಯಾಪ್ತಿಯಲ್ಲಿ 693 ಕ್ರಿಟಿಕಲ್, 33 ವಲ್ನರಬಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸದರಿ ಮತಗಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲು ಕ್ರಮ ವಹಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ 40 ಗುಲಾಬಿ ಬಣ್ಣದ (ಪಿಂಕ್) ಮತಗಟ್ಟೆಗಳು, 8 ವಿಶೇಷಚೇತನರ ಮತಗಟ್ಟೆಗಳು, 16 ಸಾಂಪ್ರಾದಾಯಿಕ (ಯತ್ನಿಕ್) ಮತ್ತು 16 ಯುವ ಮತಗಟ್ಟೆಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ.

ವೆಬ್ ಕಾಸ್ಟಿಕ್ ಅಳವಡಿಕೆ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಕೆಲವು ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್ ಅಳವಡಿಸಲಾಗಿತ್ತು. ಈಗ ಲೋಕಸಭೆ ಚುನಾಣೆಯಲ್ಲಿ ಮಂಡ್ಯ ಜಿಲ್ಲೆಯ 911 ಮತಗಟ್ಟೆಗಳು ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಒಟ್ಟು 1037 ಮತಗಟ್ಟೆಗಳಿಗೆ ವೆಬ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮತಗಟ್ಟೆಗಳ ನೇರಪ್ರಸಾರವನ್ನು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳು ಹಾಗೂ ಚುನಾವಣಾ ಆಯೋಗದ ಸಿಇಒ ಕಚೇರಿಯಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಸಂತೆ, ಜಾತ್ರೆ ನಿಷೇಧ

“ಪ್ರಜಾಪ್ರಭುತ್ವದ ಮತದಾನದ ಹಬ್ಬಕ್ಕೆ ಆಮಂತ್ರಣ” ಪತ್ರಗಳನ್ನು ಪ್ರತಿ ಕುಟುಂಬಗಳಿಗೆ ಈ ಚುನಾವಣೆಯಲ್ಲಿ ವಿತರಿಸಲಾಗುತ್ತಿದೆ. ವೋಟರ್‌ಸ್ಲಿಪ್‌ನೊಂದಿಗೆ ಆಮಂತ್ರಣ ಪತ್ರವನ್ನು ಕಳುಹಿಸಿಕೊಡಲಾಗುವುದು. ಪ್ರತಿ ಅರ್ಹ ಮತದಾರರು ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಚುನಾವಣೆ ನಡೆಯುವ ಏ.26ರಂದು ಜಿಲ್ಲೆಯಲ್ಲಿ ನಡೆಯುವ ಎಲ್ಲ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಬಕಾರಿ ಇಲಾಖೆ ಉಪ ಆಯುಕ್ತ ವಿ.ರವಿಶಂಕರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!