ಗ್ರಾಮೀಣ ಜನರ ಕುಂದು ಕೊರತೆಗಳನ್ನು ಆಲಿಸಿ, ಅವರ ಸಮಸ್ಯೆಗಳನ್ನು ಪರಿಹರಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ನಾಗಮಂಗಲ ತಾಲ್ಲೂಕಿನ ಕಾಳಿಂಗನಹಳ್ಳಿಯಲ್ಲಿ ಜೂನ್ 22 ಹಾಗೂ 23 ರಂದು ನಡೆಯಲಿದೆ.
ಇಂದು ಸಂಜೆ ಅಧಿಕಾರಿಗಳೊಂದಿಗೆ ಕಾಳಿಂಗನಹಳ್ಳಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಸ್. ಅಶ್ವತಿ ಅವರಿಗೆ ಗ್ರಾಮಸ್ಥರು ಅಭೂತ ಪೂರ್ವಕ ಸ್ವಾಗತ ನೀಡಿದರು. ಎತ್ತಿನಗಾಡಿಯಲ್ಲಿ ಗ್ರಾಮದ ಮುಖ್ಯದ್ವಾರದಿಂದ ಜಿಲ್ಲಾಧಿಕಾರಿ ಅಶ್ವತಿಯವರನ್ನು ಗ್ರಾಮದ ಒಳಗೆ ಕರೆತರಲಾಯಿತು.
ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತದ ಮೂಲಕ ಜಿಲ್ಲಾಧಿಕಾರಿಯವರನ್ನು ಕರೆತಂದರು.
ಗ್ರಾಮೀಣ ಜನರ ಸಮಸ್ಯೆಗಳನ್ನು ಕೇಳಲು ಜಿಲ್ಲಾಧಿಕಾರಿಗಳು ಕಾಳಿಂಗನಹಳ್ಳಿಯಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ.
ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದು ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡಿದರು. ಜಿಲ್ಲಾಧಿಕಾರಿಗಳು ನಮ್ಮ ಗ್ರಾಮಕ್ಕೆ ಆಗಮಿಸಿರುವುದು ಸಂತಸದ ವಿಚಾರ. ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸಿ ಕೊಡುವ ಮೂಲಕ ಗ್ರಾಮದ ಅಭಿವೃದ್ಧಿ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ನಾಗಮಂಗಲ ತಹಶೀಲ್ದಾರ್ ನಂದೀಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.