Sunday, May 5, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರದಿಂದ ರಾಜ್ಯಕ್ಕಾದ ತೆರಿಗೆ ವಂಚನೆ; ವಾಸ್ತವ ಸಂಗತಿಗಳೇನು….? ಇಲ್ಲಿದೆ ಸಂಪೂರ್ಣ ಮಾಹಿತಿ…..

✍️ ದರ್ಶನ್ ಜೈನ್
ಸಂಗ್ರಹ: ಕೀಲಾರ ನಾಗೇಗವ್ಡ 

ರಾಜ್ಯದ ತೆರಿಗೆ ಪಾಲಿನಲ್ಲಿ ಅನ್ಯಾಯ ಸತ್ಯ ಸಂಗತಿಯೇ ?? ಎಂಬ ಮುಖ್ಯ ಪ್ರಶ್ನೆಗೆ ಉತ್ತರ ಹೌದು! ಇದು ಸತ್ಯ ಸಂಗತಿ ಎಂದೇ ಹೇಳಬೇಕಾಗುತ್ತದೆ ! ಜೊತೆಗೆ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಕುರಿತಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಪಾದಿಸುತ್ತಿರುವ ಅಂಕಿ ಅಂಶಗಳು ಕೂಡ ಸರಿ ಇವೆ. ಹೌದೇ ? ಅದು ಹೇಗೆ ಎಂಬ ಎಂದು ತಿಳಿದುಕೊಳ್ಳುವ ಮುನ್ನ; ತೆರಿಗೆಯ ಹಂಚಿಕೆ ಹೇಗೆ ಆಗುತ್ತದೆ ? ಯಾರ ಪಾಲಿಗೆ ಎಷ್ಟು ತೆರಿಗೆ ಹೋಗುತ್ತಿದೆ ? ಯಾರ ಖರ್ಚು ಎಷ್ಟು ? ಯಾರ ಆದಾಯ ಎಷ್ಟು ಎಂಬುವುದನ್ನು ಮೊದಲು ನೋಡೋಣ.

ರಾಜ್ಯಗಳಲ್ಲಿ ಸಂಗ್ರಹವಾಗುವ ತೆರಿಗೆಗಳು ಮತ್ತು ಸೆಸ್ ಗಳು ಒಕ್ಕೂಟ ಸರ್ಕಾರಕ್ಕೆ ಹೋಗುತ್ತವೆ, ಒಟ್ಟೂ ಸಂಗ್ರಹವಾದ ತೆರಿಗೆಗಳನ್ನು ಎಲ್ಲಿ ಎಷ್ಟು ಹಂಚಬೇಕೆಂದು(ತೆರಿಗೆ ಹಂಚಿಕೆಯನ್ನು) ಹಣಕಾಸು ಆಯೋಗವು ಶಿಫಾರಸ್ಸು ಮಾಡುತ್ತದೆ, ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಪಾಲನ್ನು, ಮೊತ್ತವನ್ನು ಹಂಚಬೇಕಿರುವುದು ಒಕ್ಕೂಟ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಮುಖ್ಯವಾಗಿ ತೆರಿಗೆಯನ್ನು ಎರಡು ಭಾಗವಾಗಿ ಮೇಲೆ ಹಂಚಿಕೆ ಮಾಡಲಾಗುತ್ತದೆ. ಮೊದಲನೇಯದ್ದು ವರ್ಟಿಕಲ್ ಡೆವಲ್ಯೂಶನ್ (Vertical tax devolution), ಮತ್ತು ಎರಡನೇ ಭಾಗ ಸಮತಲ ತೆರಿಗೆ ಹಂಚಿಕೆ (Horizontal tax devolution).

ಹಾರಿಜಾಂಟಲ್ ಡೆವಲ್ಯೂಶನ್ನಲ್ಲಿ ರಾಜ್ಯ ಮತ್ತು ರಾಜ್ಯಗಳ ಮಧ್ಯೆ ಎಷ್ಟು ಪ್ರಮಾಣದಲ್ಲಿ ಹಂಚಿಕೆ ಆಗಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ, ಹಾಗೂ ವರ್ಟಿಕಲ್ ಡೆವಲ್ಯೂಶನ್ನಲ್ಲಿ ಒಕ್ಕೂಟ ಮತ್ತು ರಾಜ್ಯಗಳ ಮಧ್ಯೆ ಎಷ್ಟು ಪ್ರಮಾಣದಲ್ಲಿ ತೆರಿಗೆಯು ಹಂಚಿಕೆ ಆಗಬೇಕು ಎಂಬುದು ನಿರ್ಧಾರವಾಗುತ್ತದೆ. ಹಾರಿಜಾಂಟಾಲ್ ಡೆವಲ್ಯೂಶನ್ನಲ್ಲಿ ರಾಜ್ಯ-ರಾಜ್ಯಗಳ ಮಧ್ಯೆ ಎಷ್ಟು ಹಂಚಿಕೆ ಆಗಬೇಕು ಎಂಬುದನ್ನು ಶಿಫಾರಸ್ಸು ಮಾಡಲಾಗುತ್ತದೆ. ತದನಂತರ ನೂರು ಅಂಕಗಳ ಸೂತ್ರದಲ್ಲಿ ರಾಜ್ಯದ ಜನಸಂಖ್ಯೆ (15), ರಾಜ್ಯದ ವಿಸ್ತೀರ್ಣ (15), ಅರಣ್ಯ ಮತ್ತು ಪರಿಸರ (10), ರಾಜ್ಯಗಳ ಆದಾಯ ಅನುಪಾತ(45), ರಾಜ್ಯಗಳ ಜನಸಂಖ್ಯೆ ನಿಯಂತ್ರಣದ ಪ್ರಗತಿ (12.5), ತೆರಿಗೆ ಮತ್ತು ವಿತ್ತೀಯ ಶಿಸ್ತು (2.5) ತೆರಿಗೆ ಹಂಚಿಕೆಯನ್ನು ಹಣಕಾಸು ಆಯೋಗವು ಶಿಫಾರಸ್ಸು ಮಾಡುತ್ತದೆ. ಇದಲ್ಲದೇ ಒಕ್ಕೂಟ ಸರ್ಕಾರವು ತನ್ನ ಪಾಲಿನಲ್ಲಿ ಕೊಡಲೇಬೇಕಿರುವ ಅನುದಾನಗಳ ಅಡಿಯಲ್ಲಿ ವಿತ್ತೀಯ ಕೊರತೆ ಅನುದಾನ, ವಲಯ ನಿರ್ದಿಷ್ಟ ಅನುದಾನ, ರಾಜ್ಯ ನಿರ್ದಿಷ್ಟ ಅನುದಾನ , ಸ್ಥಳೀಯ ಸಂಸ್ಥೆಗಳ ಅನುದಾನ, ವಿಪತ್ತು ನಿರ್ವಹಣಾ ಅನುದಾನಗಳನ್ನು ಕೂಡ ಹಣಕಾಸು ಆಯೋಗವು ಶಿಫಾರಸ್ಸು ಮಾಡುತ್ತದೆ.

ಈಗ ನಮ್ಮ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ನೋಡೋಣ:

ಮೊದಲನೇ ಅನ್ಯಾಯ ವರ್ಟಿಕಲ್ ಡೆವಲ್ಯೂಶನ್ ನಲ್ಲಿ ಆಗಿರುವ ಅನ್ಯಾಯ : 14ನೇ ಹಣಕಾಸು ಆಯೋಗವು ಈ ಹಿಂದೆ ನಿಗದಿಪಡಿಸಿದ್ದ ರಾಜ್ಯಗಳ ಪಾಲನ್ನು 42% ರಿಂದ ಹದಿನೈದನೇ ಹಣಕಾಸು ಆಯೋಗವು 41% ಕ್ಕೆ ಇಳಿಸಿದೆ ಇದು ಒಕ್ಕೂಟ ವ್ಯವಸ್ಥೆಯ ಎಲ್ಲಾ ರಾಜ್ಯಗಳಿಗೂ ಆಗಿರುವ ಅನ್ಯಾಯ ಇದರಿಂದಾಗಿ ಕರ್ನಾಟಕ ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ ಸುಮಾರು 62,000 ಕೋಟಿ ರೂಪಾಯಿಗಳಷ್ಟು ನಷ್ಟ ಆಗಿದೆ.

ಎರಡನೇ ಅನ್ಯಾಯ ಹಾರಿಜಾಂಟಾಲ್ ಡೆವಲ್ಯೂಶನ್ನಲ್ಲಿ ಆಗಿರುವ ಅನ್ಯಾಯ: 14ನೇ ಹಣಕಾಸು ಆಯೋಗವು ಜಿಎಸ್‌ಟಿ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಅಂತ 4.72% ಜಿಎಸ್‌ಟಿ ಮೊತ್ತವನ್ನು ನಿಗದಿಪಡಿಸಿತ್ತು, ಆದರೆ ಹದಿನೈದನೇ ಹಣಕಾಸು ಆಯೋಗವು ಇದನ್ನು 3.64% ಕ್ಕೆ ಇಳಿಸಿದೆ. ಇದರಿಂದ ಕರ್ನಾಟಕಕ್ಕೆ ಬರುತ್ತಿದ್ದ ಅನುದಾನದಲ್ಲಿ ಸುಮಾರು 73,600 ಕೋಟಿ ರೂಪಾಯಿಗಳಷ್ಟು ನಷ್ಟ ಆಗಿದೆ, ಮಾತ್ರವಲ್ಲ ಹದಿನೈದನೇ ಹಣಕಾಸು ಆಯೋಗವು ತನ್ನ ಮೊದಲನೇ ವರದಿಯಲ್ಲಿ ಶಿಫಾರಸ್ಸು ಮಾಡಿದ್ದ ವಿಶೇಷ ಅನುದಾನ (5493 ಕೋಟಿ ರೂಪಾಯಿಗಳು )ಮತ್ತು ಬೆಂಗಳೂರಿನ ಫೆರಿಫೆರಲ್ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿಗಾಗಿ ಶಿಫಾರಸ್ಸು ಮಾಡಿದ್ದ ಸುಮಾರು 6000 ಕೋಟಿ ರೂಪಾಯಿಗಳನ್ನು ಕೂಡ (ಒಟ್ಟೂ 11,493 ಕೋಟಿ ರೂಪಾಯಿಗಳು) ಕೊಡದೇ ಒಕ್ಕೂಟ ಸರ್ಕಾರವು ವಂಚಿಸಿದೆ. ಈ ಅನ್ಯಾಯವನ್ನು ಎತ್ತಿ ತೋರಿಸಬೇಕಿದ್ದ , ರಾಜ್ಯದ ರಾಜಧಾನಿಯ ಪ್ರತಿನಿಧಿಯಾಗಿ ಲೋಕಸಭೆಯಲ್ಲಿ ಇರುವ, ನೈತಿಕ ಜವಾಬ್ದಾರಿ ಹೊರಲೇಬೇಕಿದ್ದ ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೊಡಲಿ ಕಾವು ಕುಲಕ್ಕೆ ಮೂಲ ಎಂಬಂತೆ ವರ್ತಿಸಿ , ರಾಜ್ಯಕ್ಕೆ ಒಕ್ಕೂಟ ಸರ್ಕಾರ ಮಾಡಿರುವ ಅನ್ಯಾಯವನ್ನು ಸುಳ್ಳುಗಳ ಮೂಲಕ, ತಪ್ಪು ವ್ಯಾಖ್ಯಾನಗಳ ಮೂಲಕ ಸಮರ್ಥಿಸಿಕೊಂಡರು.

ಮೂರನೆಯದ್ದು ಒಕ್ಕೂಟ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಅನುದಾನವಿಲ್ಲ: ರಾಜ್ಯದಲ್ಲಿ ಸುಮಾರು 20 ವಿವಿಧ ಇಲಾಖೆಗಳಡಿ ಒಕ್ಕೂಟ ಸರಕಾರ ರೂಪಿಸಿರುವ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅದಕ್ಕಾಗಿ ಒಕ್ಕೂಟ ಸರ್ಕಾರವು ೨೦೨೨-೨೦೨೩ರ ಸಾಲಿನಲ್ಲಿ 19,357.34 ಕೋಟಿ ರೂ. ಅನುದಾನ ಹಂಚಿಕೆಯ ಘೋಷಣೆಯನ್ನು ಮಾಡಿತ್ತು, ಆದರೆ ಇದರಲ್ಲಿ ತಾನೇ ರೂಪಿಸಿರುವ ಯೋಜನೆಗಳಿಗೆ ಒಕ್ಕೂಟ ಸರ್ಕಾರವು ಒಂದೇ ಒಂದು ಬಿಡಿಗಾಸನ್ನೂ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಒಕ್ಕೂಟ ಸರಕಾರದ ಸಾಂಖ್ಯಿಕ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರವೇ 2022-2023ರ ಸಾಲಿನಲ್ಲಿ 12 ಇಲಾಖೆಗಳಲ್ಲಿನ ಒಕ್ಕೂಟ ಸರ್ಕಾರ ಪ್ರಾಯೋಜಿಸಿರುವ ಯೋಜನೆಗಳಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ.

12 ಪ್ರಮುಖ ಇಲಾಖೆಗಳಿಗೆ ಶೂನ್ಯ ಅನುದಾನ: ಒಟ್ಟು 12 ವಿವಿಧ ಇಲಾಖೆಗಳಲ್ಲಿನ ಒಕ್ಕೂಟ ಸರ್ಕಾರವು ತನ್ನ ಪಾಲಿನ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಕಂದಾಯ, ನಗರಾಭಿವೃದ್ಧಿ, ವಸತಿ, ಕೃಷಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಜಲಸಂಪನ್ಮೂಲ, ಅರಣ್ಯ, ರೇಷ್ಮೆ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿನ ಒಕ್ಕೂಟ ಸರ್ಕಾರದ ಯೋಜನೆಗಳಿಗೆ ಒಂದೇ ಒಂದು ಪೈಸೆಯ ಅನುದಾನವೂ ಬಿಡುಗಡೆಯಾಗಿಲ್ಲ. ರಾಜ್ಯದ ಆರು ಸಾವಿರ ಗ್ರಾಮ ಪಂಚಾಯತಿಗಳಿಗೆ ಜೀವಾಳವಾಗಿರುವ ಸುಮಾರು ಮೂರೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನಗಳು ಪ್ರಮುಖವಾಗಿ ಜಲಜೀವನ್ ಮಿಷನ್ , ನೈರ್ಮಲ್ಯ ಯೋಜನೆಗಳು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಯಾಂತ್ರಿಕತೆ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಪೋಷಣ ಅಭಿಯಾನ, ಮಾತೃ ವಂದನಾ ಹೀಗೆ ಬಹುತೇಕ ಒಕ್ಕೂಟ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ಅನುದಾನಗಳು ಇದುವರೆಗೂ ಬಿಡುಗಡೆಯಾಗಿಲ್ಲ ಎಂದರೆ ಎಷ್ಟರಮಟ್ಟಿಗೆ ಅನ್ಯಾಯ ಆಗುತ್ತಿದೆ ಎಂದು ಯೋಚಿಸಬಹುದು!

ನೀರಾವರಿ ಯೋಜನೆಗಳಲ್ಲಿ ಅನ್ಯಾಯ : ಭದ್ರಾ ಮೇಲ್ದಂಡೆ ಯೋಜನೆಗಾಗಿ ಒಕ್ಕೂಟ ಸರ್ಕಾರವು 2023-2024ರ ಸಾಲಿನಲ್ಲಿ 5,300 ಕೋಟಿ ರೂಪಾಯಿಗಳನ್ನು ಘೋಷಿಸಿತ್ತು, ಆದರೆ ಇದುವರೆಗೂ ಚಿಕ್ಕಾಸನ್ನೂ ಕೊಟ್ಟಿಲ್ಲ, ಉತ್ತರ ಕರ್ನಾಟಕದ ನೀರಿನ ಬವಣೆ ನೀಗಿಸಬಲ್ಲ ನೀರಾವರಿ ಯೋಜನೆಗಳಾದ ಮಹದಾಯಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಕಳಸಾ- ಬಂಡೂರಿ ಯೋಜನೆ, ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಬಲ್ಲ ಮೇಕೆದಾಟು ಯೋಜನೆ ಈ ಯಾವ ಯೋಜನೆಗಳ ಅನುಷ್ಠಾನಕ್ಕೆ ಒಕ್ಕೂಟ ಸರ್ಕಾರ ಅನುಮತಿಯನ್ನೂ ನೀಡುತ್ತಿಲ್ಲ.

ಬರ ಪರಿಹಾರ ಮತ್ತು ವಿಪತ್ತು ನಿರ್ವಹಣಾ ಅನುದಾನಗಳಲ್ಲಿ ಅನ್ಯಾಯ : ಕರ್ನಾಟಕ ಸರ್ಕಾರವು ನ್ಯಾಯಯುತವಾಗಿ ಕೋರಿದ್ದ 18,177 ಕೋಟಿ ರೂಪಾಯಿಗಳ ವಿಶೇಷ ಬರ ಪರಿಹಾರ ಅನುದಾನವನ್ನು ಒಕ್ಕೂಟ ಸರ್ಕಾರವು ಕೊಡದೇ ಅನ್ಯಾಯ ಎಸಗಿದೆ.

ಹೀಗೆ ಹದಿನೈದನೇ ಹಣಕಾಸು ಆಯೋಗದ ಅವಧಿಯಲ್ಲಿ ಅಂದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಆದ ಆರ್ಥಿಕ ನಷ್ಟ ಸುಮಾರು 1,87,000,00,00,000 ರೂಪಾಯಿಗಳು !
ಲೋಕಸಭೆಯಲ್ಲಿ ರಾಜ್ಯವನ್ನ್ನು ಪ್ರತಿನಿಧಿಸುವ 28 ಜನ ಸಂಸದರಿದ್ದಾರೆ, ಇವರಲ್ಲಿ ಒಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಬಿಜೆಪಿಯ ಬಣದವರು ! ಇಷ್ಟು ಅಭೂತಪೂರ್ವ ಬೆಂಬಲವನ್ನು ಕೊಟ್ಟರೂ ಕೂಡಾ, ರಾಜ್ಯಕ್ಕೆ ಸಿಗಬೇಕಾದ ಅನುದಾನಗಳು, ನ್ಯಾಯ ದೊರಕುತ್ತಿಲ್ಲ, ಇದಕ್ಕೆ ಮುಖ್ಯ ಕಾರಣವೇ ಬಿಜೆಪಿ ಮತ್ತು ಜೆಡಿಎಸ್ ಸಂಸದರು. ರಾಜ್ಯದ ಮುಖ್ಯಮಂತ್ರಿಗಳು ಎತ್ತುತ್ತಿರುವ ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಎಂಬ ಉತ್ತರ ಕೊಡದಷ್ಟೂ ಕೂಡಾ ನಿಶ್ಶಕ್ತರಾಗಿದ್ದಾರೆ ಕರ್ನಾಟಕದ ಬಿಜೆಪಿ ಮತ್ತು ಜೆಡಿಎಸ್ ನಾಯಕರು!

ಬಿಜೆಪಿ ಮತ್ತು ಜೆಡಿಎಸ್ ಕೂಡಿಕೆ ಮಾಡಿಕೊಳ್ಳುವ ಮುಂಚೆ ಹಿಗ್ಗಾಮುಗ್ಗಾ, ಅತ್ಯಂತ ಸಮರ್ಥ ರೀತಿಯಲ್ಲಿ ಒಕ್ಕೂಟ ಸರ್ಕಾರವನ್ನು ಜಾಡಿಸುತ್ತಿದ್ದ ಜೆಡಿಎಸ್ ನಾಯಕರು ಈಗ ಹೊಸ ಬಾಂಧವ್ಯಕ್ಕೆ ಕಟ್ಟುಬಿದ್ದು ಅಡ್ಡಗೋಡೆಯ ಮೇಲೆ ದೀಪ ಇಡುತ್ತಿದ್ದಾರೆ, ಪಾಪ ಅವರಿಗೆ ಈಗ ಬಿಸಿ ಬಿಸಿ ತುಪ್ಪ ನುಂಗಬೇಕಾದ ಸಂಕಟ! ನಾಡು-ನುಡಿ-ನೆಲ-ಜಲದ ವಿಚಾರ ಬಂದಾಗ ರಾಜ್ಯದ ಅಳಲಿಗೆ ದನಿಯಾಗುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಮೌನ ತಾಳಿದ್ದಾರೆ. ನರೇಂದ್ರ ಮೋದಿಯವರ ನಾಮಬಲದಿಂದ ಮಾತ್ರ ಗೆದ್ದಿದ್ದ ಬಿಜೆಪಿ ಸಂಸದರು ಮೋದಿಯವರ ಮುಖವಾಡ ಮುಂದಿರಿಸಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ.

ಲಾಗಾಯ್ತಿನಿಂದಲೂ ಒಕ್ಕೂಟ ಸರ್ಕಾರಗಳಿಂದ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ರೈಲ್ವೆ, ನೀರಾವರಿ, ಬಂದರು, ವಿಶೇಷ ಅನುದಾನಗಳು, ಹೆದ್ದಾರಿಗಳು, ಬರ ಪರಿಹಾರ ಹೀಗೆ ಹಲವಾರು ವಿಷಯಗಳಲ್ಲಿ ನಿರಂತರವಾಗಿ ಕರ್ನಾಟಕದ ಮೇಲೆ ಮಲತಾಯಿ ಧೋರಣೆಯನ್ನು ಒಕ್ಕೂಟ ಸರ್ಕಾರಗಳು ಅನುಸರಿಸುತ್ತಾ ಬಂದಿವೆ, ಇದಕ್ಕೆ ಯಾವ ಸರ್ಕಾರವೂ ಹೊರತಲ್ಲ, ಈ ವಿಚಾರದಲ್ಲಿ ಒಕ್ಕೂಟ ಸರಕಾರದ ತಪ್ಪು ಎಷ್ಟಿದೆಯೋ ಅಷ್ಟೇ ತಪ್ಪು ನಮ್ಮ ರಾಜ್ಯದ ಮತದಾರರದ್ದೂ ಆಗಿದೆ. ರೈಲ್ವೆ ಸಂಪರ್ಕ ಜಾಲದಲ್ಲಿ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ರಾಜ್ಯವೂ ಒಂದು, ಇದೇ ರೀತಿ ನೀರಾವರಿ, ಪ್ರವಾಸೋದ್ಯಮ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ನಾವು ದಕ್ಷಿಣದ ಇತರ ರಾಜ್ಯಗಳಿಗಿಂತಲೂ ಕೆಳಮಟ್ಟದಲ್ಲಿ ಇದ್ದೇವೆ. ಅತ್ಯಂತ ನಿರುಪಯೋಗಿ, ಗೊಡ್ಡು ದನಗಳಂತಹ ಸಂಸದರನ್ನು ಆರಿಸಿ ಲೋಕಸಭೆಗೆ ಕಳುಹಿಸುವ ನಮ್ಮ ವೀರ-ಪರಂಪರೆಯನ್ನು ರಾಜ್ಯದ ಮತದಾರ ಇನ್ನಾದರೂ ತ್ಯಜಿಸದೇ ಹೋದಲ್ಲಿ ಈ ಅನ್ಯಾಯ ನಿರಂತರವಾಗಿರಲಿದೆ.

ಇದಕ್ಕೆ ನಾವೇ ಹೊಣೆಗಾರರು! ನಮ್ಮ ಮತದಾರರು ಬದಲಾಗಬಹುದು ಎಂಬ ಬೆಳಕಿನ ಮಿಂಚು ಈ ಬಾರಿ ಕೊಂಚಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು, ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯಗಳ ಬಗ್ಗೆ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಸಾರ್ವಜನಿಕರು ದನಿ ಎತ್ತಿದ್ದರು, ಕಡೆಗೆ ರಾಜ್ಯದ ಮುಖ್ಯಮಂತ್ರಿಗಳೇ ಗಂಟೆಗಟ್ಟಲೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಬೇಕಾಯಿತು ಇದು ರಾಜ್ಯದ ಜನತೆ ತಮ್ಮ ಹಕ್ಕಿನ ಕುರಿತಾಗಿ ಎಚ್ಚೆತ್ತುಕೊಂಡಿರುವುದರ ಸಂಕೇತ ! ಸೂಕ್ತ ಗಾಳಿ ಬೀಸಿದರೆ ಈ ಮಿಂಚು ದಾವಾನಲವಾಗಿ ಪರಿವರ್ತನೆಗೊಂಡು ರಾಜ್ಯದ್ರೋಹಿಗಳಿಗೆ ಸುಟ್ಟರೂ ಆಶ್ಚರ್ಯವಿಲ್ಲ !

ಹದಿನೈದನೇ ಹಣಕಾಸು ಆಯೋಗದ ಸದಸ್ಯರಾಗಿ ಒಬ್ಬರೇ ಒಬ್ಬರು ಕೂಡ ದಕ್ಷಿಣ ಭಾರತ ಮೂಲದ ಸದಸ್ಯರು ಇರಲಿಲ್ಲ, ಈ ವಿಚಾರವಾಗಿ ಕರ್ನಾಟಕ, ತಮಿಳುನಾಡು ರಾಜ್ಯದ ಸಚಿವರು ವಿಷಾದ ಹಾಗೂ ಆಕ್ಷೇಪ ವ್ಯಕ್ತಪಡಿಸಿದ್ದರು, ರಾಜ್ಯಗಳ ಪಾಲಿನ ತೆರಿಗೆ ಹಂಚಿಕೆಯಲ್ಲಿ ಕಡಿತ ಸಹಜವಾಗಿಯೇ ಕೇರಳ, ತಮಿಳುನಾಡು ಸರ್ಕಾರವನ್ನು ಸಿಟ್ಟಿಗೆಬ್ಬಿಸಿವೆ, ಕರ್ನಾಟಕಕ್ಕೆ ಆದ ಅನ್ಯಾಯವನ್ನು ಪರಿಗಣನೆಗೆ ತೆಗೆದುಕೊಂಡಾಗ ಇದು ಸರಿಸುಮಾರು ರಾಜ್ಯದ ವಾರ್ಷಿಕ ಬಜೆಟ್ ನ 51% ದಷ್ಟು ಆಗುತ್ತದೆ. ಈ ಮೊತ್ತದಲ್ಲಿ ರಾಜ್ಯವು ಸರಿ ಸುಮಾರು ಎಂಟು ವರ್ಷಗಳ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಬಹುದಿತ್ತು. ಅನೇಕ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ನೆರವಾಗಬಹುದಿತ್ತು. ಇದು ಖಂಡಿತವಾಗಿಯೂ ದೂರಗಾಮಿ ದುಷ್ಪರಿಣಾಮವನ್ನು ಬೀರಲಿದೆ.

ಭಾರತವು ಒಂದು ರಾಜ್ಯಗಳ ಒಕ್ಕೂಟ (India is a Union of States ) ಎಂಬ ದನಿ ಹಿಂದೆಂದಿಗಿಂತ ಸ್ಪಷ್ಟವಾಗಿ ಈಗ ಕೇಳಿಸುತ್ತಿದೆ. ದಕ್ಷಿಣ ಭಾರತದ ಪ್ರತೀ ರಾಜ್ಯದಲ್ಲಿಯೂ ಉತ್ತರ-ದಕ್ಷಿಣ ಬೇಧಗಳ ಚರ್ಚೆ ಜೋರು-ಜೋರಾಗಿಯೇ ನಡೆಯುತ್ತಿದೆ. ನನ್ನ ತೆರಿಗೆ ನನ್ನ ಹಕ್ಕು, south Tax Movement ಇತ್ಯಾದಿ ಹ್ಯಾಷ್ ಟ್ಯಾಗ್ ನಲ್ಲಿ ಮಾಧ್ಯಮಗಳಲ್ಲಿಯೂ, ಸಾಮಾಜಿಕ ಜಾಲತಾಣಗಳಲ್ಲೂ ಗಟ್ಟಿಯಾಗಿಯೇ ಧನಿಸುತ್ತಿದೆ. ಇದಕ್ಕೆ ಇಂಬು ಕೊಡುವಂತೆ ಕರ್ನಾಟಕದ ಸಂಸದ ಡಿಕೆ ಸುರೇಶ್ ಎತ್ತಿದ್ದ ಪ್ರಶ್ನೆಗಳು ಬಹಳ ಸದ್ದು ಮಾಡಿದ್ದವು. ರಾಜಕೀಯವಾಗಿ, ಆರ್ಥಿಕವಾಗಿ ದಕ್ಷಿಣ ಭಾರತಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಮುಂದುವರೆಯುತ್ತಾ ಹೋದಲ್ಲಿ, ಮುಂದೆ ದೇಶದ ಅಖಂಡತೆಗೂ ಸವಾಲಾಗುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗದು. ಈಗಾಗಲೇ ರಾಜ್ಯದ ತೆರಿಗೆ ಪಾಲಿನ ಅನ್ಯಾಯದ ವಿರುದ್ಧ ಕರ್ನಾಟಕದ ಮುಖ್ಯಮಂತ್ರಿಗಳು ನ್ಯಾಯ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ದೇಶದಲ್ಲಿ ತೆರಿಗೆಯ ಜೊತೆಗೆ ಸೆಸ್ ಮತ್ತು ಸರ್ಚಾರ್ಜ್ ಕೂಡ ಸಂಗ್ರಹವಾಗುತ್ತದೆ, ಇದು ಅಷ್ಟಿಷ್ಟು ಮೊತ್ತವಲ್ಲ! ದೇಶದ ಬಜೆಟ್ ನ 13% ನಷ್ಟು ಸುಮಾರು (5,63,000 ಕೋಟಿ ರೂಪಾಯಿಗಳು) ಇದರಲ್ಲಿ ಚಿಕ್ಕಾಸನ್ನು ಕೂಡ ಒಕ್ಕೂಟ ಸರ್ಕಾರವು ಯಾವುದೇ ರಾಜ್ಯಕ್ಕೆ ಹಂಚಿಕೆ ಮಾಡುತ್ತಿಲ್ಲ. ಈ ವಿಚಾರದಲ್ಲಿಯೂ ದೇಶದ ಅನೇಕ ರಾಜ್ಯ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ ಒಕ್ಕೂಟ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿ ರಾಜ್ಯಗಳನ್ನು ಕುದಿಯುವಂತೆ ಮಾಡಿದೆ. ದೇಶದ ಸರ್ಕಾರದ ವಿರುದ್ಧವೇ ಕರ್ನಾಟಕ, ತಮಿಳುನಾಡು, ಕೇರಳ, ಪಂಜಾಬ್, ದೆಹಲಿ ಸರ್ಕಾರದ ಮುಖ್ಯಮಂತ್ರಿಗಳು ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಪಾಲಿನ, ತಮ್ಮ ಹಕ್ಕಿನ ತೆರಿಗೆ ಹಂಚಿಕೆಯನ್ನು ಪಡೆಯಲು ರಾಜ್ಯಗಳ ಮುಖ್ಯಸ್ಥರು ಧರಣಿಗೆ, ಸುಪ್ರೀಂಕೋರ್ಟ್ಗೆ ಹೋಗುವಂತೆ ಮಾಡುವುದು ಒಕ್ಕೂಟ ವ್ಯವಸ್ಥೆಯ ಆರೋಗ್ಯಕಾರಿ ಲಕ್ಷಣವಲ್ಲ !

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!