Sunday, May 5, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ ಸಿಪಿಐಎಂ ಕಾರ್ಯಕರ್ತನಿಗೆ ಜೆಡಿಎಸ್ ಕಾರ್ಯಕರ್ತನ ಬೆದರಿಕೆ

ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಬೇಡ ಎಂದು ಜೆಡಿಎಸ್ ಕಾರ್ಯಕರ್ತರು ಸಿಪಿಐಎಂ ಕಾರ್ಯಕರ್ತನಿಗೆ ಬೆದರಿಕೆ ಹಾಕಿರುವ ಪ್ರಕರಣ ನಡೆದಿದೆ.

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ಇರುವ ಅಣ್ಣೂರು ಗ್ರಾಮದಲ್ಲಿ ಸಿಪಿಐಎಂ ಕಾರ್ಯಕರ್ತ ಹನುಮೇಶ್ ಅವರಿಗೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡದಂತೆ ಗದರಿಸಿದ್ದಲ್ಲದೆ, ಪ್ರಚಾರ ಮಾಡಿದರೆ ನಮ್ಮ ಕಾರ್ಯಕರ್ತರಿಗೆ ಹೇಳಿ ಕಂಬಕ್ಕೆ ಕಟ್ಟಿ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ .ಈ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜೆಡಿಎಸ್ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದು ಬೇಡ ಎಂದಿರುವುದಲ್ಲದೆ ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ ಏನಾಗುತ್ತೆ ನೋಡು ಎಂದು ಧಮಕಿ ಹಾಕಿ ಎಚ್ಚರಿಕೆ ನೀಡಿರುವುದು ಕಂಡು ಬರುತ್ತದೆ.

ಹನುಮೇಶ್ ರವರು ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಮತ ಕೇಳಿದ್ದೆವು, ಆದರೆ ಈಗ ಕುಮಾರಸ್ವಾಮಿಯವರು ಕೋಮುವಾದಿ ಬಿಜೆಪಿ ಪಕ್ಷವನ್ನು ಸೇರಿರುವುದರಿಂದ ನಮ್ಮ ಪಕ್ಷ ಹಾಗೂ ಸಂಘಟನೆ ಹೇಳಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ಹನುಮೇಶ್ ಹೇಳಿದರೂ ಅದನ್ನೆಲ್ಲ ನಮಗೆ ಹೇಳಬೇಡ. ನೀನು ಕಾಂಗ್ರೆಸ್ ಪರ ಪ್ರಚಾರ ಮಾಡುವುದು ಬೇಡ ಇಲ್ಲಿಂದ ಹೊರಡು ಎಂದು ಧಮ್ಕಿ ಹಾಕಿದ್ದಾರೆ.

ಈ ಘಟನೆ ಖಂಡಿಸಿರುವ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕೇಳುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಸಂಘಟನೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದು ಅದರಂತೆ ಹನುಮೇಶ್ ಮತಯಾಚಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತನಿಗೆ ಗ್ರಾಮದಲ್ಲಿ ಪ್ರಚಾರ ಮಾಡಬೇಡಿ ಎಂದು ಹೇಳಿ ಅವರನ್ನು ಹಿಂದೆ ಸರಿಸುವುದು ಸಾಧ್ಯವಿಲ್ಲ. ನಮ್ಮ ಸಂಘಟನೆ ಹಾಗೂ ಕಾರ್ಯಕರ್ತರು ಬೆದರಿ ಪ್ರಚಾರದಿಂದ ಹಿಂದೆ ಸರಿಯುವುದೂ ಇಲ್ಲ.ಜೆಡಿಎಸ್ ಕಾರ್ಯಕರ್ತರು ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದ್ದಾರೆ.

ಜನವಾದಿ ಮಹಿಳಾ ಸಂಘಟನೆಯ ಸಿ. ಕುಮಾರಿ,ನಮ್ಮ ಸಂಘಟನೆ ಕಾರ್ಯಕರ್ತ ಹನುಮೇಶ್ ಅವರಿಗೆ ಜೆಡಿಎಸ್ ಕಾರ್ಯಕರ್ತರು ಬೆದರಿಕೆ ಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ವಿಚಾರ ಹೇಳಲು ಸ್ವಾತಂತ್ರ್ಯವಿದೆ. ಅದರಂತೆ ಒಂದು ಪಕ್ಷದ ಪರವಾಗಿ, ಮತ್ತೊಂದು ಪಕ್ಷದ ವಿರುದ್ಧವಾಗಿ ಮಾತನಾಡಲು ಕೂಡ ಸ್ವಾತಂತ್ರ್ಯವಿದೆ.

ಆದರೆ ಜೆಡಿಎಸ್ ಮುಖಂಡರು ಪ್ರಚಾರ ಮಾಡದಂತೆ ಬೆದರಿಕೆ ಆಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ನಮ್ಮ ಸಂಘಟನೆಯ ನಿಲುವನ್ನು ಹೇಳುವುದು ನಮ್ಮ ಹಕ್ಕು. ಕುಮಾರಸ್ವಾಮಿಯವರು ಕಾರ್ಮಿಕ ವಿರೋಧಿ, ಜನವಿರೋಧಿ, ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದು ಇದನ್ನು ನಾವು ವಿರೋಧಿಸುತ್ತೇವೆ. ಬೆದರಿಕೆ ಹಾಕಿ ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಸದೆಬಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!