Monday, April 29, 2024

ಪ್ರಾಯೋಗಿಕ ಆವೃತ್ತಿ

”ಟೋಬಿ” ಚಿತ್ರ ಚೆನ್ನಾಗಿಲ್ಲ ಎಂದ ಮಹಿಳೆ ಮೇಲೆ ಹಲ್ಲೆಗೆ ಯತ್ನ; ಅವಾಚ್ಯ ಪದಗಳಿಂದ ನಿಂದನೆ

ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಚಿತ್ರ ವೀಕ್ಷಿಸಿ ಚಿತ್ರಮಂದಿರದಿಂದ ಮಹಿಳೆಯೊಬ್ಬರು ಯುಟ್ಯೂಬ್ ಚಾನೆಲ್ ಒಂದಕ್ಕೆ ಪ್ರತಿಕ್ರಿಸುವಾಗ ‘ಚಿತ್ರ ಚೆನ್ನಾಗಿಲ್ಲ’ ಎಂದು ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ವ್ಯಕ್ತಿಯೋರ್ವ ಕನ್ನಡ ಸಿನಿಮಾ ಚೆನ್ನಾಗಿಲ್ಲ ಅಂತೀಯಲ್ಲ ಎಂದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

ಯಾವುದೇ ಚಿತ್ರ ಬಿಡುಗಡೆಯಾದ ದಿನ ಚಿತ್ರಮಂದಿರದ ಮುಂದೆ ಮಾಧ್ಯಮ ಪ್ರತಿನಿಧಿಗಳು ಬಂದು ಚಿತ್ರ ಹೇಗಿದೆ ಎಂದು ಪ್ರೇಕ್ಷಕರ ಅಭಿಪ್ರಾಯಗಳನ್ನು ಕೇಳುವುದು ಸಹಜವಾಗಿದೆ. ಅದೇ ರೀತಿ ಟೋಬಿ ಚಿತ್ರಕ್ಕೂ ಸಹ ಚಿತ್ರ ಹೇಗಿದೆ ಹೇಳಿ ಎಂದು ಯುಟ್ಯೂಬ್ ಚಾನೆಲ್ ಪ್ರತಿನಿಧಿಯೊಬ್ಬರು ಚಿತ್ರ ವೀಕ್ಷಿಸಿ ಹೊರಬಂದ ಮಹಿಳೆಯನ್ನು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಅವರು ಚೆನ್ನಾಗಿಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಅಲದ್ಲಿರುವ ವ್ಯಕ್ತಿಯೊಬ್ಬ ಆ ಮಹಿಳೆಯನ್ನು ನಿಂದಿಸಿ ಹಲ್ಲೆಗೆ ಮಾಡಲು ಮುಂದಾಗಿದ್ದಾನೆ.

ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: https://www.facebook.com/100000653307625/videos/1692111347915910/

ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ಮುಗಿದ ಬಳಿಕ ಮಾತನಾಡಿದ್ದ ಈ ಮಹಿಳೆ ಚಿತ್ರ ಚೆನ್ನಾಗಿಲ್ಲ ಎಂದು ನೇರವಾಗಿ ಕ್ಯಾಮೆರಾ ಮುಂದೆ ನಿಂತು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಕನ್ನಡ ಸಿನಿಮಾ ಚೆನ್ನಾಗಿಲ್ಲ ಅಂತೀಯಲ್ಲ ಅವಾಚ್ಯ ಪದಗಳನ್ನು ಬಳಸಿ ಆಕೆಯನ್ನು ನೂರಾರು ಜನರ ಮುಂದೆ ನಿಂದಿಸಿದ್ದಾನೆ.

ಚಿತ್ರ ಚೆನ್ನಾಗಿಲ್ಲ ಅನ್ನೋಕೆ ನೀನ್ಯಾರು, ಚಿತ್ರ ಚೆನ್ನಾಗಿದೆ, ಚಿತ್ರ ನೋಡಿ ಹೇಗಿದೆ ಎಂದು ಹೇಳಲು ನಿನಗೆ ಯಾರು ಹೇಳಿದ್ರು? ಎಂದೆಲ್ಲಾ ಜೋರು ದನಿಯಲ್ಲಿ ಮಾತನಾಡಿದ್ದಾನೆ. ಕನ್ನಡ ಚಿತ್ರವೊಂದನ್ನು ನೋಡಲು ಬಂದ ಮಹಿಳೆಗೆ ವ್ಯಕ್ತಿಯೊಬ್ಬ ಅತಿ ಕೆಟ್ಟ ಪದ ಬಳಕೆ ಮಾಡುತ್ತಿದ್ದರೂ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಸಹ ಆಕೆಯದ್ದೆ ತಪ್ಪು, ಚಿತ್ರ ಚೆನ್ನಾಗಿಲ್ಲ ಎಂದಿದ್ದೇ ತಪ್ಪು ಎಂದಿದ್ದಾರೆ.

ಈ ಘಟನೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ ಚಿತ್ರಮಂದಿರದ ಮ್ಯಾನೇಜರ್, ಆ ಮಹಿಳೆಯನ್ನು ಅಲ್ಲಿಂದ ಕಳುಹಿಸಿದ್ದಾರೆ. ಆನಂತರ ಮಾಧ್ಯಮದ ಎದುರು ಮಾತನಾಡಿದ ಅವರು, ”ಆಕೆ ಡ್ರಗ್ ಅಡಿಕ್ಟ್ ಅನಿಸುತ್ತೆ, ಯಾರೋ ಚಿತ್ರ ಚೆನ್ನಾಗಿಲ್ಲ ಅಂತ ಹೇಳಿ ಕಳುಹಿಸಿದ್ದಾರೆ ಅನಿಸುತ್ತದೆ. ನಾನು ಚಿತ್ರ ನೋಡಿದೆ, ಆಕೆ ಹೇಳುವ ಹಾಗಿಲ್ಲ” ಎಂದು ಮಹಿಳೆಯ ವಿರುದ್ಧವೇ ಮಾತನಾಡಿದ್ದಾರೆ.

ಚಿತ್ರಮಂದಿರದ ಅಂಗಳದಲ್ಲಿ ತನ್ನ ಪರ ಯಾರೊಬ್ಬರೂ ಮಾತನಾಡದೇ ಇದ್ದಾಗ ಆ ಮಹಿಳೆ ಅಲ್ಲಿಂದ ನೋವಿನಿಂದಲೇ ಹೊರನಡೆದಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಅನೇಕರು ಚಿತ್ರ ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಚಿತ್ರಮಂದಿರಕ್ಕೆ ಚಿತ್ರಗಳನ್ನು ವೀಕ್ಷಿಸುವ ಪ್ರೇಕ್ಷಕರು ಚಿತ್ರ ಸೂಪರ್ ಎಂದು ಹೇಳಲೇಬೇಕಾ? ಎಂಬ ಪ್ರಶ್ನೆ ಮಾಡಿದ್ದಾರೆ.

”ನಮ್ಮ ಸ್ವಂತ ಹಣದಿಂದ ಟಿಕೆಟ್ ಖರೀದಿಸಿ ಚಿತ್ರ ನೋಡಿರುತ್ತೇವೆ. ಚಿತ್ರ ಹೇಗಿದೆ ಎಂದು ಹೇಳುವ ಎಲ್ಲಾ ರೀತಿಯ ಹಕ್ಕು ನಮಗೆ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಆಕ್ರೋಶದ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಟೋಬಿ ಚಿತ್ರ ಬೃಹತ್ ನಿರೀಕ್ಷೆಯೊಂದಿಗೆ ಚಿತ್ರಮಂದಿರಗಳ ಅಂಗಳಕ್ಕೆ ಬಂದಿದೆ. ಆದರೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಕೆಲವರು ಚಿತ್ರ ಮಾಸ್ಟರ್‌ಪೀಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರೆ, ಇನ್ನೂ ಕೆಲವರು ಚಿತ್ರ ನಿರೀಕ್ಷಿಸಿದ ರೇಂಜ್‌ಗೇನೂ ಇಲ್ಲ, ಒಮ್ಮೆ ನೋಡಬಹುದು ಎಂಬ ಟ್ವೀಟ್‌ಗಳನ್ನು ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!