Monday, May 6, 2024

ಪ್ರಾಯೋಗಿಕ ಆವೃತ್ತಿ

20 ಎಕರೆಗೂ ಹೆಚ್ಚು ಪ್ರದೇಶದ ಕಬ್ಬು ಭಸ್ಮ: ಬೆಂಕಿಗೆ ಸಿಲುಕಿ ರೈತ ಸಜೀವ ದಹನ

ಕಬ್ಬಿನ ಗದ್ದೆ ಬೆಂಕಿಗೆ ಸುಟ್ಟು ಹೋಗುತ್ತಿರುವುದನ್ನು ಸಹಿಸಲಾರದೆ, ಹೇಗಾದರೂ ಮಾಡಿ ಬೆಂಕಿಯನ್ನು ಆರಿಸಬೇಕು ಎಂದು ಮುಂದಾದ ರೈತನೋರ್ವ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ, ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಮಹಾಲಿಂಗಯ್ಯ (60) ಎಂಬಾತನೇ ಮೃತಪಟ್ಟ ರೈತ. ಘಟನೆಯಿಂದಾಗಿ ಸುಮಾರು 20 ಎಕರೆಗೂ ಹೆಚ್ಚು ಪ್ರದೇಶದ ಕಬ್ಬು ಭಸ್ಮವಾಗಿದೆ.

ಇದನ್ನೂ ಓದಿ : ಮೃತ ರೈತ ಮಹಾಲಿಂಗಯ್ಯ ಕುಟುಂಬಕ್ಕೆ ರಾಜ್ಯ ಸರ್ಕಾರ ನೆರವಾಗಲಿ: ಹೆಚ್‌ಡಿಕೆ

ಭಾನುವಾರ ಮಧ್ಯಾಹ್ನ ಸುಮಾರು ಒಂದು ಗಂಟೆಯ ವೇಳೆ ಮೊಡಚಾಕನಹಳ್ಳಿ ಗ್ರಾಮದಲ್ಲಿರುವ ಮಹಾಲಿಂಗಯ್ಯ ಅವರು ಜಮೀನಿನ ಬಳಿ ಹೋಗಿದ್ದಾರೆ. ಈ ವೇಳೆ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ನಂದಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬೆಂಕಿಯ ಕೆನ್ನಾಲಿಗೆ ಅವರಿಗೂ ತಗುಲಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.

ದಟ್ಟ ಹೊಗೆಯನ್ನು ನೋಡಿದ ಗ್ರಾಮಸ್ಥರು ತಕ್ಷಣ ಜಮೀನಿನ ಬಳಿಗೆ ಬಂದು ನೀರು, ಮಣ್ಣು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟೊತ್ತಿಗೆ ಸುಮಾರು 20 ಎಕರೆ ಪ್ರದೇಶದ ಕಬ್ಬಿಗೂ ಬೆಂಕಿ ವ್ಯಾಪಿಸಿದೆ.

ಗ್ರಾಮದ ಮಹೇಶ ಅವರಿಗೆ ಸೇರಿದ 8 ಎಕರೆ, ಜವರೇಗೌಡರ 1.5 ಎಕರೆ, ಪಾಪಣ್ಣ ಅವರ 2 ಎಕರೆ, ಶಂಕರ್ ಎಂಬವರ 1 ಎಕರೆ ಕಬ್ಬು ಬೆಳೆ ಅವಘಡದಿಂದ ಭಸ್ಮವಾಗಿದೆ. ಇದರೊಂದಿಗೆ ಮಹೇಶ್‌ ಎಂಬುವರ ಒಂದೂವರೆ ಎಕರೆ ಬಾಳೆ ತೋಟವೂ ಸೇರಿದಂತೆ ಟ್ರಾಕ್ಟರ್ ನ ಟ್ರಾಲಿಯು ಬೆಂಕಿಗಾಹುತಿಯಾಗಿದೆ ಎಂದು ವರದಿಯಾಗಿದೆ.

20 ಎಕರೆಗೂ ಹೆಚ್ಚು ಪ್ರದೇಶದ ಕಬ್ಬು ಭಸ್ಮ

ಸಂಸದೆ ಸುಮಲತಾ ಅವರು ಈ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ಮೃತ ರೈತ ಮಹಾಲಿಂಗಯ್ಯ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಚರ್ಚಿಸಿ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರ್ಕಾರದಿಂದ 5 ಲಕ್ಷ ಪರಿಹಾರ ಹಾಗೂ ಕುಟುಂಬ ನಿರ್ವಹಣೆಗಾಗಿ ಎರಡು ಹಸುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು. ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ ತಹಶೀಲ್ದಾರ್ ಕುಞ ಅಹಮದ್ ಸೇರಿದಂತೆ ಇತರರು ಭೇಟಿ ನೀಡಿ ಸಾಂತ್ವನ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಮಹಾಲಿಂಗಯ್ಯ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!