Sunday, May 5, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಕ ವೃತ್ತಿಯ ಪವಿತ್ರತೆ ಕಾಪಾಡುವ ಹೊಣೆ ನಮ್ಮೆಲ್ಲರದು – ನಿರ್ಮಲಾನಂದಶ್ರೀ

ವಿಶ್ವದ ಏಕೈಕ ಶ್ರೇಷ್ಠ ವೃತ್ತಿ ಎಂದರೆ ಅಧ್ಯಾಪಕತ್ವ. ಈ ವೃತ್ತಿಯ ಪರಮ ಪವಿತ್ರತೆಯನ್ನು ಕಾಪಾಡುವ ಹೊಣೆ ಶಿಕ್ಷಕರಾಗುತ್ತಿರುವ ನಿಮ್ಮೆಲ್ಲರ ಮೇಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ನಾಗಮಂಗಲ ಬಿ ಜಿ ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮುಕ್ತಿಗೆ ಸನ್ಮಾರ್ಗವನ್ನು ತೋರಿಸುವ ವಿದ್ಯಾದಿ ಜ್ಞಾನ ಮಾರ್ಗದಲ್ಲಿ ನಡೆದು, ಗುರುವಿನ ನೆರಳಿನಲ್ಲಿ ಬೆಳೆದು ರಾಷ್ಟ್ರ ಮೆಚ್ಚುವ ಶ್ರೇಷ್ಠ ಶಿಕ್ಷಕರಾಗಿ ಎಂದು ಆಶಯ ವ್ಯಕ್ತಪಡಿಸಿದರು. ಶ್ರದ್ಧೆಯಿಂದ ಗಳಿಸಿದ 25 ವರ್ಷಗಳ ಕಲಿಕೆ ಮತ್ತು ಸಾಧನೆ ಮುಂದಿನ 75 ವರ್ಷಗಳ ಸುಖಿ ಜೀವನಕ್ಕೆ ಸಾಧನವಾಗಲಿ ಎಂದು ಆಶೀರ್ವದಿಸಿದರು.

ಶೈಕ್ಷಣಿಕ ತಂತ್ರಜ್ಞ ಡಾ. ಈ ಎಸ್ ಚಕ್ರವರ್ತಿ ಮಾತನಾಡಿ, ಏಕಾಗ್ರತೆ, ಸಮಯ ಪಾಲನೆ ನಿಮ್ಮನ್ನು ಬಹು ಎತ್ತರಕ್ಕೆ ಕೊಂಡಯುತ್ತದೆ. ಮಾತೃಭಾಷೆ ಎಂದಿಗೂ ಎಲ್ಲರ ಆತ್ಮದಲ್ಲಿ ಬೆಳೆಯಲಿ ಮೊಳೆಯಲಿ. ಬಿ.ಇಡಿ ವ್ಯಾಸಂಗದಲ್ಲಿ 36 ಕೌಶಲ್ಯಗಳನ್ನು ಕಲಿತ ನೀವು ಶ್ರೇಷ್ಠ ಶಿಕ್ಷಕರಾಗಿ  ಮಕ್ಕಳ ಅಭಿವೃದ್ಧಿಯ ಸಹವರ್ತಿಗಳಾಗಿ ಎಂದು ಹಾರೈಸಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಂ.ಎ.ಶೇಖರ್, ಶಿಕ್ಷಕ ಪದದ ಮಹತ್ವ ಮತ್ತು ಅರ್ಥಗಳನ್ನು ತಿಳಿಸಿ, ವೃತ್ತಿಯ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಿ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎ.ಟಿ. ಶಿವರಾಮು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಬಿ.ಇಡಿ ವ್ಯಾಸಂಗದ ಮಹತ್ವ ಹಾಗೂ ಪರಿಧಿಯನ್ನು ಅನಾವರಣಗೊಳಿಸಿದರು. ಬಿ ಇಡಿ ವಿದ್ಯಾರ್ಥಿಗಳು ತಮ್ಮ ಮನದಾಳದ ಮನೋಜ್ಞ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರು,, ಕಾಲೇಜಿನ ಅಧ್ಯಾಪಕರು ಹಾಗೂ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!